ಆರನೇ ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ ಇಫೊ, ಮಲೇಷ್ಯಾ (ಪಿಟಿಐ): ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಆರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಈ ಹಾದಿಯಲ್ಲಿ ಇನ್ನೊಂದೇ ಹೆಜ್ಜೆ ಇಡಬೇಕಿದೆ. ಮನದೀಪ್ ಸಿಂಗ್‌ ಕೈಚಳಕದಲ್ಲಿ ಅರಳಿದ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಬುಧವಾರ ಕೆನಡಾ ತಂಡವನ್ನು 7–3 ಗೋಲುಗಳಿಂದ ಮಣಿಸಿದ ಮನಪ್ರೀತ್‌ ಸಿಂಗ್ ಬಳಗ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಜಯದೊಂದಿಗೆ ತಂಡ ಒಟ್ಟು ಪಾಯಿಂಟ್ಸ್‌ ಅನ್ನು 10ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡು ಅಂತಿಮ ಘಟಕ್ಕೆ ಪ್ರವೇಶಿಸಿತು. ಈ ಬಾರಿ ನಾಲ್ಕು ಪಂದ್ಯಗಳನ್ನು ಆಡಿರುವ ಮನಪ್ರೀತ್‌ ಪಡೆ ಮೂರರಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ. ಕೆನಡಾ ವಿರುದ್ಧ ಭಾರತ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೊದಲ ಕ್ವಾರ್ಟರ್‌ನಲ್ಲಿ ವರುಣ್‌ ಕುಮಾರ್‌, ತಂಡದ ಖಾತೆ ತೆರೆದರು. 12ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಅವರು ಗೋಲಾಗಿ ಪರಿವರ್ತಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಮನದೀಪ್ ಸಿಂಗ್‌ ಮೋಡಿ ಮಾಡಿದರು. ಅವರು ಮೂರು ಫೀಲ್ಡ್‌ ಗೋಲು ಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. 20ನೇ ನಿಮಿಷದಲ್ಲಿ ವೈಯಕ್ತಿಕ ಮೊದಲ ಗೋಲು ಹೊಡೆದ ಅವರು 27ನೇ ನಿಮಿಷದಲ್ಲೂ ಕೈಚಳಕ ತೋರಿದರು. ಕೆನಡಾ ತಂಡದ ದುರ್ಬಲ ರಕ್ಷಣಾ ಕೋಟೆಯನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದ ಮನದೀಪ್‌ 29ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಹೀಗಾಗಿ ಭಾರತ 4–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದ ಶುರುವಿನಲ್ಲಿ ಕೆನಡಾ ತಂಡ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. 35ನೇ ನಿಮಿಷದಲ್ಲಿ ಮಾರ್ಕ್‌ ಪಿಯರ್ಸನ್‌ ಗೋಲು ಬಾರಿಸಿ ಹಿನ್ನಡೆಯನ್ನು 1–4ಕ್ಕೆ ತಗ್ಗಿಸಿದರು. ನಂತರ ಭಾರತದ ಆಟ ಇನ್ನಷ್ಟು ರಂಗೇರಿತು. 39ನೇ ನಿಮಿಷದಲ್ಲಿ ಚೆಂಡಿನೊಂದಿಗೆ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಿದ ಅಮಿತ್‌ ರೋಹಿದಾಸ್‌ ಅದನ್ನು ಚುರುಕಾಗಿ ಗುರಿ ಸೇರಿಸಿ ಸಂಭ್ರಮಿಸಿದರು. ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ 5–1ರಿಂದ ಮುಂದಿದ್ದ ಭಾರತ, ಅಂತಿಮ ಕ್ವಾರ್ಟರ್‌ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿತು. ಕೆನಡಾ ಕೂಡಾ ದಿಟ್ಟ ಸಾಮರ್ಥ್ಯ ತೋರಿತು. ಈ ತಂಡದ ಫಿನ್‌ ಬೂತ್‌ಥ್ರೋಯ್ಡ್‌ 50ನೇ ನಿಮಿಷದಲ್ಲಿ ಗೋಲು ಬಾರಿಸಿ ಕಳೆಗುಂದಿದ್ದ ಕೆನಡಾ ಆಟಕ್ಕೆ ರಂಗು ತುಂಬುವ ಪ್ರಯತ್ನ ಮಾಡಿದರು. ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಸಮಯ ಉಳಿಯಲು ಭಾರತದ ವಿವೇಕ್‌ ಪ್ರಸಾದ್‌ ಅವಕಾಶ ನೀಡಲಿಲ್ಲ. 55ನೇ ನಿಮಿಷದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿ ತಂಡದ ಗೆಲುವನ್ನು ಖಾತ್ರಿ ಪಡಿಸಿದರು. 57ನೇ ನಿಮಿಷದಲ್ಲಿ ಕೆನಡಾ ತಂಡದ ಜೇಮ್ಸ್‌ ವಾಲ್ಲಸ್‌ ಗೋಲು ಬಾರಿಸಿ ಹಿನ್ನಡೆಯನ್ನು 3–6ಕ್ಕೆ ತಗ್ಗಿಸಿದರು. ಪಂದ್ಯ ಮುಗಿಯಲು ಮೂರು ನಿಮಿಷ ಬಾಕಿ ಇದ್ದಾಗಲೂ ಭಾರತದ ಗೋಲಿನ ಬೇಟೆ ಮುಂದುವರಿದಿತ್ತು. 58ನೇ ನಿಮಿಷದಲ್ಲಿ ನೀಲಕಂಠ ಶರ್ಮಾ ಕೈಚಳಕ ತೋರಿ ಮನಪ್ರೀತ್ ಪಡೆಯ ಆಟಗಾರರು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು. ಹಾರ್ದಿಕ್‌ ಸಿಂಗ್‌ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.