ಬ್ಯಾಡ್ಮಿಂಟನ್‌: ಸಿಂಧು ಶುಭಾರಂಭ ನವದೆಹಲಿ (ಪಿಟಿಐ): ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಾರೆಗಳೆನಿಸಿರುವ ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಶುಭಾರಂಭ ಮಾಡಿದ್ದಾರೆ. ಕೆ.ಡಿ.ಜಾಧವ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಸಿಂಧು 21–8, 21–13 ನೇರ ಗೇಮ್‌ಗಳಿಂದ ಭಾರತದವರೇ ಆದ ಮುಗ್ದಾ ಆಗ್ರೇಯ ಅವರನ್ನು ಮಣಿಸಿದರು. 2017ರ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಸಿಂಧು ಎರಡು ಗೇಮ್‌ಗಳಲ್ಲೂ ಮಿಂಚಿನ ಆಟ ಆಡಿ ಎದುರಾಳಿಯನ್ನು ಕಂಗೆಡಿಸಿದರು. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಶುಭಂಕರ್‌ ಡೇ ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ನಾಲ್ಕನೇ ಶ್ರೇಯಾಂಕದ ಆಟಗಾರ ಟಾಮಿ ಸುಗಿಯಾರ್ತೊಗೆ ಆಘಾತ ನೀಡಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನ ಹೊಂದಿರುವ ಶುಭಂಕರ್‌ 14–21, 22–20, 21–11ರಲ್ಲಿ ಗೆದ್ದರು. ಶ್ರೀಕಾಂತ್‌ 21–16, 18–21, 21–19ರಲ್ಲಿ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಅವರನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಎಚ್‌.ಎಸ್‌. ಪ್ರಣಯ್‌ 14–21, 21–18, 21–14ರಲ್ಲಿ ಥಾಯ್ಲೆಂಡ್‌ನ ಕೆಂಟಾಪನ್‌ ವಾಂಗ್‌ಚಾರೊಯೆನ್‌ ಎದುರು ವಿಜಯಿಯಾದರು. ಐದನೇ ಶ್ರೇಯಾಂಕದ ಆಟಗಾರ ಸಮೀರ್‌ ವರ್ಮಾ 21–18, 21–12ರಲ್ಲಿ ಡೆನ್ಮಾರ್ಕ್‌ನ ರಸ್ಮಸ್‌ ಗೆಮ್ಕೆ ಅವರನ್ನು ಸೋಲಿಸಿದರು. ರಿಯಾ ಮುಖರ್ಜಿ 21–17, 21–15ರಲ್ಲಿ ಪಿಟ್ಟಾಯ್‌ಪೊರ್ನ್‌ ಚಿವಾನ್‌ಗೆ ಆಘಾತ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.