ಗಾಲ್ಫ್: ಲಾಹಿರಿ, ಚೌರಾಸಿಯಾ ಆಕರ್ಷಣೆ ಗುರುಗ್ರಾಮ (ಪಿಟಿಐ): ಭಾರತದ ಅನಿರ್ಬನ್‌ ಲಾಹಿರಿ, ಎಸ್‌.ಎಸ್‌.ಪಿ.ಚೌರಾಸಿಯಾ ಮತ್ತು ಶುಭಂಕರ್‌ ಶರ್ಮಾ ಅವರು ಗುರುವಾರದಿಂದ ನಡೆಯುವ ಹೀರೊ ಇಂಡಿಯನ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಡಿಎಲ್‌ಎಫ್‌ ಗಾಲ್ಫ್‌ ಆ್ಯಂಡ್‌ ಕಂಟ್ರಿ ಕ್ಲಬ್‌ನಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 156 ಮಂದಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ರಾಷ್ಟ್ರೀಯ ಓಪನ್‌ನಲ್ಲಿ ತಲಾ ಮೂರು ಪ್ರಶಸ್ತಿ ಗೆದ್ದಿರುವ ಲಾಹಿರಿ ಮತ್ತು ಚೌರಾಸಿಯಾ ತವರಿನಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ. ಇವರಿಗೆ ಥಾಯ್ಲೆಂಡ್‌ನ ಜಾಜ್‌ ಜನೆವಾಟ್ಟನಾನೊಡ್‌, ಆಡ್ರಿಯನ್‌ ಒಟಾಯೆಗು, ಶಾನ್‌ ನೊರಿಸ್‌ ಮತ್ತು ಜಾರ್ಜ್‌ ಕ್ಯಾಂಪಿಲೊ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಇವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಹೊಂದಿದ್ದಾರೆ. ಜಾಜ್‌ ಅವರು ಸಿಂಗಪುರ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ವಿಕ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಡೇವಿಡ್‌ ಲಾ, ಹಾಂಕಾಂಗ್ ಓಪನ್ ಪ್ರಶಸ್ತಿ ಜಯಿಸಿದ್ದ ಆ್ಯರನ್‌ ರಾಯ್‌ ಮತ್ತು ಮಲೇಷ್ಯಾ ಚಾಂಪಿ ಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸ್ಕಾಟ್‌ ಹೆಂಡ್‌ ಅವರೂ ಕಣದಲ್ಲಿದ್ದಾರೆ. ಸ್ಕಾಟಿಸ್‌ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಬ್ರೆಂಡನ್‌ ಸ್ಟೋನ್‌, ಬರ್ನಾಡ್‌ ವೀಸ್‌ಬರ್ಗರ್‌ ಮತ್ತು ಗ್ಯಾವಿನ್‌ ಗ್ರೀನ್ ಅವರೂ ಪ್ರಶಸ್ತಿಯ ಕನಸಿನಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.