ಚಿನ್ನಕ್ಕೆ ಮುತ್ತಿಟ್ಟ ಮನು–ಸೌರಭ್‌ ನವದೆಹಲಿ (ಪಿಟಿಐ): ನಿಖರ ಗುರಿ ಹಿಡಿದ ಭಾರತದ ಮನು ಭಾಕರ್‌ ಮತ್ತು ಸೌರಭ್‌ ಚೌಧರಿ ಅವರು ಚೀನಾ ತೈಪೆಯ ತಾವೊಯುನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಏರ್‌ಗನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಿಶ್ರ ತಂಡ ವಿಭಾಗದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ಜೋಡಿಯಿಂದ ಈ ಸಾಧನೆ ಮೂಡಿಬಂದಿದೆ. ಇದಕ್ಕೂ ಮೊದಲು ನಡೆದ ಅರ್ಹತಾ ಸುತ್ತಿನಲ್ಲಿ ಮನು ಮತ್ತು ಸೌರಭ್‌ 784 ಸ್ಕೋರ್‌ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು. ಭಾರತದ ಯುವ ಜೋಡಿಯು, ರಷ್ಯಾದ ವಿಟಾಲಿನಾ ಬಟ್ಸರಾಸ್ಕಿನಾ ಮತ್ತು ಆರ್ಟಮ್‌ ಚೆರ್ನೌಸೋವ್‌ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿತು. ವಿಟಾಲಿನಾ ಮತ್ತು ಆರ್ಟಮ್‌ ಅವರು ಐದು ದಿನಗಳ ಹಿಂದೆ ನಡೆದಿದ್ದ ಯುರೋ‍ಪಿಯನ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಹಂತದಲ್ಲಿ ವಿಶ್ವದಾಖಲೆ ಬರೆದಿದ್ದರು. 17ರ ಹರೆಯದ ಮನು ಮತ್ತು 16 ವರ್ಷ ವಯಸ್ಸಿನ ಸೌರಭ್‌, ಸರಿಯಾಗಿ ಒಂದು ತಿಂಗಳ ಹಿಂದೆ ನವದೆಹಲಿಯಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಸ್ಟೇಜ್‌ ಟೂರ್ನಿಯಲ್ಲೂ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಬುಧವಾರ ನಡೆದ ಐದು ತಂಡಗಳ ಫೈನಲ್‌ನಲ್ಲಿ ಭಾರತದ ಜೋಡಿ ಅಪೂರ್ವ ಸಾಮರ್ಥ್ಯ ತೋರಿತು. ಒಟ್ಟು 484.8 ಸ್ಕೋರ್‌ ಕಲೆಹಾಕಿದ ಮನು ಮತ್ತು ಸೌರಭ್‌ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ದಕ್ಷಿಣ ಕೊರಿಯಾದ ವಾಂಗ್‌ ಸಿಯೊಂಗ್‌ವುನ್‌ ಮತ್ತು ಕಿಮ್‌ ಮೋಸ್‌ ಅವರು ಈ ವಿಭಾಗದ ಬೆಳ್ಳಿಯ ಪದಕ ಜಯಿಸಿದರು. ದಕ್ಷಿಣ ಕೊರಿಯಾದ ಜೋಡಿ ಒಟ್ಟು 481.1 ಸ್ಕೋರ್‌ ಗಳಿಸಿತು. ಭಾರತ ಮತ್ತು ದಕ್ಷಿಣ ಕೊರಿಯಾದ ಶೂಟರ್‌ಗಳ ನಡುವೆ ಆರಂಭದಿಂದಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಕೊನೆಯ ಅವಕಾಶಗಳಲ್ಲಿ ನಿಖರ ಗುರಿ ಹಿಡಿದ ಭಾರತದ ಜೋಡಿ, ವಾಂಗ್‌ ಮತ್ತು ಕಿಮ್ ಅವರನ್ನು ಹಿಂದಿಕ್ಕಿತು. ಚೀನಾ ತೈಪೆಯ ವು ಚಿಯಾ ಯಿಂಗ್‌ ಮತ್ತು ಕೌ ಕುವಾನ್‌ ಟಿಂಗ್‌ ಅವರು ಕಂಚಿನ ಪದಕ ಪಡೆದರು. ಇವರು 413.3 ಸ್ಕೋರ್‌ ಕಲೆಹಾಕಿದರು. ಇದೇ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಅನುರಾಧ ಮತ್ತು ಅಭಿಷೇಕ್ ವರ್ಮಾ ಕೂಡಾ ಫೈನಲ್‌ ಪ್ರವೇಶಿಸಿದ್ದರು. ಭಾರತದ ಜೋಡಿಯು 372.1 ಸ್ಕೋರ್‌ ಕಲೆಹಾಕಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.