ಒಂದೇ ಸೂರಿನಡಿ ಕ್ರೀಡಾ ವೈವಿಧ್ಯ ಬೆಂಗಳೂರು: ಅಂತರರಾಷ್ಟ್ರೀಯ ಗುಣಮಟ್ಟದ ಬ್ಯಾಸ್ಕೆಟ್‌ಬಾಲ್ ಅಂಗಣ, ಸೆವೆನ್‌ ಎ–ಸೈಡ್ ಮತ್ತು ಫೈವ್‌ ಎ–ಸೈಡ್ ಫುಟ್‌ಬಾಲ್‌ಗೆ ಸುಸಜ್ಜಿತ ಸೌಲಭ್ಯ, ಓಟಕ್ಕೆ 200 ಮೀಟರ್ಸ್‌ ಅಂತರದ ಟ್ರ್ಯಾಕ್‌, ಥ್ರೋಸ್‌ ಮತ್ತು ಜಂಪ್ಸ್‌ಗೆ ಅನುಕೂಲಕರ ಫೀಲ್ಡ್‌, ಕ್ರಿಕೆಟ್‌ ಕಲಿಯಲು ನೆಟ್ಸ್... ಪದ್ಮನಾಭನಗರದಲ್ಲಿರುವ ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆಯ ಆವರಣದಲ್ಲಿ ಆರಂಭಗೊಂಡಿರುವ ನೆಟ್ಟಕಲ್ಲಪ್ಪ ಕ್ರೀಡಾ ಕೇಂದ್ರ ಸ್ಥಾಪಿಸಿರುವ ಸೌಕರ್ಯಗಳು ಇವು. ಇಲ್ಲಿ, ಏಪ್ರಿಲ್ ಒಂದರಿಂದ ಮೂರು ಹಂತಗಳಲ್ಲಿ ಬೇಸಿಗೆ ಶಿಬಿರಗಳು ನಡೆಯಲಿವೆ. ಕ್ರೀಡಾ ಕೇಂದ್ರವನ್ನು ಅಧ್ಯಕ್ಷ ತಿಲಕ್‌ ಕುಮಾರ್ ಅವರು ಶನಿವಾರ ಉದ್ಘಾಟಿಸಿದರು. ‘ತಂದೆಯವರಾದ ಕೆ.ಎ.ನೆಟ್ಟಕಲ್ಲಪ್ಪ ಅವರ ಹೆಸರಿನಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ’ ಎಂದು ತಿಲಕ್ ಕುಮಾರ್ ಅವರು ತಿಳಿಸಿದರು. ನೆಟ್ಟಕಲ್ಲಪ್ಪ ಅವರು 1960 ಮತ್ತು 1970ರ ಅವಧಿಯಲ್ಲಿ ರಾಜ್ಯದಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಕ್ರೀಡೆಯನ್ನು ಬೆಳೆಸಿದ್ದರು. ಭಾರತ ಒಲಿಂಪಿಕ್ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿದ್ದ ಅವರು ರಾಜ್ಯ ಒಲಿಂಪಿಕ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದರು. ಡೆಕ್ಕನ್‌ ಅಥ್ಲೆಟಿಕ್ ಕ್ಲಬ್‌ನ ಸ್ಥಾಪಕರೂ ಆಗಿದ್ದಾರೆ. ಬ್ಯಾಡ್ಮಿಂಟನ್‌, ಬಿಲಿಯರ್ಡ್ಸ್‌ ಮತ್ತು ವೇಟ್‌ಲಿಫ್ಟಿಂಗ್‌ ಕ್ರೀಡೆಗೂ ಅವರು ಅಪಾರ ಪ್ರೋತ್ಸಾಹ ನೀಡಿದ್ದರು. ಅಥ್ಲೆಟಿಕ್ಸ್‌, ಬ್ಯಾಸ್ಕೆಟ್‌ಬಾಲ್‌, ಫುಟ್‌ಬಾಲ್ ಮತ್ತು ಕ್ರಿಕೆಟ್ ಜೊತೆಯಲ್ಲಿ ಈಜು ತರಬೇತಿಗೂ ಬೇಸಿಗೆ ಶಿಬಿರದಲ್ಲಿ ಆದ್ಯತೆ ಸಿಗಲಿದೆ. ಈ ಮೂಲಕ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಒಂದೇ ಸೂರಿನಡಿ ವೈವಿಧ್ಯಮಯ ಕ್ರೀಡಾ ತರಬೇತಿ ಸಿಗುವ ಸ್ಥಳ ಎಂಬ ಹೆಗ್ಗಳಿಕೆ ಈ ಕೇಂದ್ರದ್ದಾಗಲಿದೆ. ‘ಪ್ರತಿ ದಿನ ಬೆಳಿಗ್ಗೆ 7.30ರಿಂದ 9 ಗಂಟೆ ಮತ್ತು ಸಂಜೆ 4.30ರಿಂದ 6 ಗಂಟೆಯ ವರೆಗೆ ತರಬೇತಿ ಇರುತ್ತದೆ. ಐದು–ಆರರಿಂದ 14 ವರ್ಷದ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಪ್ರತಿ ವಿಭಾಗದಲ್ಲೂ ತರಬೇತಿ ನೀಡಲು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕೋಚ್‌ಗಳು ಇದ್ದಾರೆ’ ಎಂದು ಕೇಂದ್ರದ ಕ್ರೀಡಾ ಸಂಯೋಜಕ ಬಿಜು ನಾಯರ್ ತಿಳಿಸಿದರು. ‘ಬೇಸಿಗೆ ಶಿಬಿರದ ನಂತರ ವರ್ಷಪೂರ್ತಿ ತರಬೇತಿ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಕ್ರೀಡೆಯ ಮೊದಲ ಪಾಠ ಕಲಿಸುವುದರೊಂದಿಗೆ ಉನ್ನತ ಮಟ್ಟದ ತರಬೇತಿ ನೀಡುವ ಉದ್ದೇಶವೂ ಇದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡುವ ಕನಸಿದೆ’ ಎಂದು ಅವರು ವಿವರಿಸಿದರು. ‘ಕ್ರೀಡೆಯನ್ನು ಅಭ್ಯಾಸ ಮಾಡಲು ಅಂಗಣಕ್ಕೇ ಇಳಿಯಬೇಕು, ಬೆವರು ಸುರಿಸಿ ಅಭ್ಯಾಸ ಮಾಡಬೇಕು. ಅದನ್ನು ಪುಸ್ತಕ ಓದಿ ಅಥವಾ ಕಂಪ್ಯೂಟರ್‌ ಮೂಲಕ ಕಲಿಯಲು ಸಾಧ್ಯವಿಲ್ಲ. ಈ ಕಾರಣದಿಂದ ಡೆಕ್ಕನ್‌ ಶಾಲೆ ಕ್ರೀಡೆಯ ಮೂಲಸೌಲಭ್ಯಗಳನ್ನು ಹೆಚ್ಚಿಸಲು ಒತ್ತು ನೀಡುತ್ತಿದೆ. ಈಗ ಶಾಲೆಯ ಆವರಣದಲ್ಲೇ ಸುಸಜ್ಜಿತ ಅಂಗಣಗಳನ್ನು ಕಲ್ಪಿಸಿರುವುದರಿಂದ ಶಾಲೆಯ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ’ ಎಂಬುದು ಪ್ರಾಚಾರ್ಯೆ ಅನುರಾಧಾ ಆನೆಕಲ್‌ ಅವರ ಅಭಿಪ್ರಾಯ. ‘ಶಾಲೆಯಲ್ಲಿ ಈಗಾಗಲೇ ಬ್ಯಾಸ್ಕೆಟ್‌ಬಾಲ್‌ ತರಬೇತಿ ನೀಡಲಾಗುತ್ತಿದೆ. ಈಗ ಇಲ್ಲೂ ತರಬೇತಿ ಆರಂಭಗೊಂಡಿರುವುದರಿಂದ ಇನ್ನಷ್ಟು ಅನುಕೂಲವಾಗಿದೆ. ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಯೋಜನೆಯೂ ಇದೆ’ ಎಂದು ಬ್ಯಾಸ್ಕೆಟ್‌ಬಾಲ್‌ ಕೋಚ್‌ ವರುಣ್ ಎಂ.ಆರ್‌ ವಿವರಿಸಿದರು. ‘ಓಟ, ಸೈಕ್ಲಿಂಗ್‌, ಈಜು, ಬ್ಯಾಸ್ಕೆಟ್‌ಬಾಲ್‌, ಫುಟ್‌ಬಾಲ್‌ ಮತ್ತು ಕ್ರಿಕೆಟ್‌ ಒಳಗೊಂಡ ಸೌಲಭ್ಯಗಳು ಒಂದೇ ಕಡೆ ಸಿಗುತ್ತಿರುವುದು ಇಲ್ಲಿನ ವೈಶಿಷ್ಟ್ಯ’ ಎಂದು ಕ್ರೀಡಾ ಕಾರ್ಯಕ್ರಮ ಸಂಯೋಜಕ ವಿರೂಪ್ ಜಿ.ಆರ್‌ ಹೇಳಿದರು. *** ಬೆಂಗಳೂರು ದಕ್ಷಿಣದಲ್ಲಿ ಒಂದೇ ಜಾಗದಲ್ಲಿ ಇಷ್ಟೊಂದು ಸೌಲಭ್ಯಗಳು ಸಿಗುತ್ತಿರುವುದು ಅಪರೂಪ. ಇದು ಕ್ರೀಡಾ ಆಸಕ್ತರಿಗೆ ಲಭಿಸಿದ ವರವಾಗಿದೆ. -ಬಿಂದು ರಾಣಿ, ಅಥ್ಲೆಟಿಕ್ ಕೋಚ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.