ಕಬಡ್ಡಿ: ಗದಗ ಮೆಡಿಕಲ್ ಕಾಲೇಜು ಚಾಂಪಿಯನ್ ಮಂಡ್ಯ: ಮೆಡಿಕಲ್ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಂಡವು ಪ್ರಥಮ ಸ್ಥಾನ ಗಳಿಸಿತು. ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಹಾಗೂ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ವತಿಯಿಂದ ನಗರದ ಒಕ್ಕಲಿಗರ ವಸತಿ ನಿಲಯದ ಕ್ರೀಡಾಂಗಣದಲ್ಲಿ ಮೂರು ದಿನಗಳಿಂದ ನಡೆದ ರಾಜ್ಯಮಟ್ಟದ ಕಬಡ್ಡಿ ಕ್ರೀಡಾಕೂಟ ಶನಿವಾರ ಮುಕ್ತಾಯವಾಯಿತು. ದ್ವಿತೀಯ ಸ್ಥಾನ ಗಳಿಸಿದ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಂಡ ₹ 5 ಸಾವಿರ ನಗದು, ಪಾರಿತೋಷಕ ತನ್ನದಾಗಿಸಿಕೊಂಡಿತು. ಬಾಗಲಕೋಟೆ ಸಜ್ಜನಶ್ರೀ ಆಯುರ್ವೇದ ಕಾಲೇಜು ಮೂರನೇ ಸ್ಥಾನ ಹಾಗೂ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ನಾಲ್ಕನೇ ಸ್ಥಾನ ಪಡೆದು ಪಾರಿತೋಷಕ ಹಾಗೂ ಪ್ರಮಾಣ ಪತ್ರಗಳನ್ನು ಪಡೆದುಕೊಂಡವು. ಪಂದ್ಯಾವಳಿಯಲ್ಲಿ ಆಡಿದ ಉತ್ತಮ ಆಟಗಾರರನ್ನು ಆಲ್ ಇಂಡಿಯಾ ಯುನಿವರ್ಸಿಟಿ ಚಾಂಪಿಯನ್ ಶಿಪ್‌ಗೆ ಆಡಲು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ತಂಡವನ್ನು ಆಯ್ಕೆ ಮಾಡಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ.ರಮೇಶ್ ನಾಯಕ್ ಮತ್ತು ನಂಜುಂಡಸ್ವಾಮಿ ಅವರು ಕ್ರೀಡಾಕೂಟದ ವೀಕ್ಷಕರಾಗಿ ಹಾಗೂ ರಾಷ್ಟ್ರೀಯ ಕಬಡ್ಡಿ ಆಟಗಾರ ಶಿವರಾಮೇಗೌಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.