ಆದಾಯ ಗಳಿಕೆಯಲ್ಲಿ ಸೈನಾ ಗಣನೀಯ ಸಾಧನೆ ನವದೆಹಲಿ: ಭಾರತದ ಸೈನಾ ನೆಹ್ವಾಲ್‌ ಅವರು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿಯರ ಪೈಕಿ ಅತಿ ಹೆಚ್ಚು ಗಳಿಕೆ ಇರುವ ಎರಡನೇ ಆಟಗಾರ್ತಿ ಎಂದೆನಿಸಿಕೊಂಡಿದ್ದಾರೆ. ಹೊಸ ಋತುವಿನ ಮೊದಲ ಕ್ವಾರ್ಟರ್‌ನಲ್ಲಿ ಅವರ ಗಳಿಕೆ ₹ 25.40 ಲಕ್ಷ ಆಗಿದೆ. ಮೊದಲ ಸ್ಥಾನದಲ್ಲಿರುವ ಚೀನಾದ ಚೆನ್ ಯೂಫಿ ₹ 59.56 ಲಕ್ಷ ಗಳಿಸಿದ್ದಾರೆ. ಚೀನಾ ಥೈಪೆಯ ತಾಯ್‌ ಸು ಯಿಂಗ್‌ ಮೂರನೇ ಸ್ಥಾನದಲ್ಲಿದ್ದು ಅವರ ಗಳಿಕೆ ₹ 24.90 ಲಕ್ಷ. ಸೈನಾ ನೆಹ್ವಾಲ್‌ ಕಳೆದ ಬಾರಿ ಸತತ ವೈಫಲ್ಯ ಕಂಡಿದ್ದರು. ಈ ಬಾರಿ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ಅವರು ಮಲೇಷ್ಯಾ ಮಾಸ್ಟರ್ಸ್ ಮತ್ತು ಆಲ್ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಚೆನ್ ಯೂಫಿ ಅವರು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದಿದ್ದರು. ತಾಯ್‌ ಸು ಯಿಂಗ್ ಅವರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಹೊರ ಬಿದ್ದಿರುವ ಪಿ.ವಿ.ಸಿಂಧು ಈಗ ನಡೆಯುತ್ತಿರುವ ಇಂಡಿಯಾ ಓಪನ್‌ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಹೀಗಾಗಿ ಮುಂದಿನ ಕ್ವಾರ್ಟರ್‌ನಲ್ಲಿ ಅವರ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಕೆಂಟೊಗೆ ಮೊದಲ ಸ್ಥಾನ: ಪುರುಷರ ವಿಭಾಗದಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ಮೊದಲ ಸ್ಥಾನದಲ್ಲಿದ್ದಾರೆ. ಜರ್ಮನ್‌ ಓಪನ್ ಮತ್ತು ಆಲ್‌ ಇಂಗ್ಲೆಂಡ್ ಟೂರ್ನಿಯ ಪ್ರಶಸ್ತಿ ಗೆದ್ದ ಮತ್ತು ಇಂಡೊನೇಷ್ಯಾ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್‌ ಆಗಿದ್ದ ಅವರು ಮೊದಲ ಕ್ವಾರ್ಟರ್‌ನಲ್ಲಿ ₹65.23 ಲಕ್ಷ ಗಳ ಒಡೆಯನಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್‌ ₹30.46 ಲಕ್ಷ ಆದಾಯ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.