ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು: ದಾಖಲೆಗಳ ಹುಡುಗಿ ತನುಶ್ರೀ ಹತ್ತನೇ ವಯಸ್ಸಿನ ಎಳೆಯ ಪ್ರತಿಭೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಹಾಗೂ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಸಾಧಕಿ ನಾಟ್ಯ ಮಯೂರಿಯೇ ತನುಶ್ರೀ ಪಿತ್ರೋಡಿ. ತನುಶ್ರೀಯ ತಂದೆ ಉದಯ್ ಕುಮಾರ್, ತಾಯಿ ಸಂಧ್ಯಾ ಹಾಗೂ ತಂಗಿ ರೀತುಶ್ರೀ. ಎಂಟನೇ ವಯಸ್ಸಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿ ಸಾಧನೆಯ ಮೆಟ್ಟಿಲುಗಳನ್ನು ಹತ್ತಲು ಆರಂಭಿಸಿದಳು ತನುಶ್ರೀ. ಪ್ರಸ್ತುತ ಉಡುಪಿಯ ಸೇಂಟ್ ಸಿಸಿಅಸ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ತನ್ನ ಮೂರು ವರ್ಷ ಪ್ರಾಯದಲ್ಲಿ ಮಾಸ್ಟರ್ ಡ್ಯಾನ್ಸ್ ಗ್ರೂಪ್ ನಲ್ಲಿ ನೃತ್ಯ ತರಭೇತಿ ಆರಂಭಿಸಿ ಮುದ್ದುಕೃಷ್ಣ ಸ್ಪರ್ಧೆ, ನೃತ್ಯ ಕಾರ್ಯಕ್ರಮವನ್ನು ನೀಡುವುದರ ಮೂಲಕ ಮನೆಮಾತಾಗಿದ್ದಳು. ಸ್ಪಂದನ ಟಿವಿ ವಾಹಿನಿಯವರು ನಡೆಸಿದ ‘ಡ್ಯಾನ್ಸ್ ಕ ಸೂಪರ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಸಬ್ ಜ್ಯೂನಿಯರ್ ವಿಬಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮ ಮಜಾ ಟಾಕೀಸ್‍ನ 150ನೇ ವಿಶೇಷ ಸಂಚಿಕೆಯಲ್ಲಿ ಮತ್ತು 2ನೇ ಸೂಪರ್ ಸಂಚಿಕೆಯಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾಳೆ. ಅಕಾಡೆಮಿ ಆಫ್ ಮೂಸ್ಯಿಕ್ ಮತ್ತು ಫೈನ್ ಆರ್ಟ್ಸ್‌ನ ನೃತ್ಯ ಗುರುಗಳಾದ ರಾಮಕೃಷ್ಣ ಕೊಡಂಚ ಅವರಿಂದ ಭರತನಾಟ್ಯ ತರಬೇತಿಯನ್ನು ಪಡೆಯುತ್ತಿದ್ದಾಳೆ. ತನ್ನ ಮೂರನೇ ವಯಸ್ಸಿಗೆ ನೃತ್ಯ ಹಾಗೂ ಸ್ಟಂಟ್ ಮಾಡುವುದರಲ್ಲಿ ನಿಪುಣಳಾಗಿದ್ದ ತನುಶ್ರೀ ಯೋಗಾಸನದಲ್ಲಿಯೂ ಆಸಕ್ತಿ ಬೆಳೆಸಿಕೊಂಡಳು. 11 ನವೆಂಬರ್ 2017 ರಂದು ತನ್ನ ಎಂಟನೇ ವಯಸ್ಸಿಗೆ ‘ನೀರಾಲಂಭ ಪೂರ್ಣ ಚಕ್ರಾಸನ’ ಎಂಬ ಕಠಿಣ ಯೋಗವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಮೊದಲನೇ ವಿಶ್ವ ದಾಖಲೆ ಮಾಡಿರುತ್ತಾಳೆ. ಕಳೆದ ವರ್ಷ ಏಪ್ರಿಲ್ 7ರಂದು ತನ್ನ 9ನೇ ವಯಸ್ಸಿಗೆ ವೆಂಕಟರಮಣ ಸ್ಪೋರ್ಟ್ಸ್‌ ಮತ್ತು ಕಲ್ಚರಲ್ಸ್ ನೇತೃತ್ವದಲ್ಲಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಯೋಗಾಸನವಾದ ‘ಮೋಸ್ಟ್ ಬಾಡಿ ರೆವಲ್ಯೂಷನ್ ಮೈಂಟೇನಿಂಗ್ ಅ ಚೆಸ್ಟ್ ಸ್ಟಾಂಡ್ ಪೊಸಿಷನ್’ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಎರಡನೇ ವಿಶ್ವ ದಾಖಲೆ ಮಾಡಿರುತ್ತಾಳೆ. ಇತ್ತೀಚೆಗೆ ‘ಧನುರಾಸನ’ ಎಂಬ ಯೋಗಾಸನದ ಭಂಗಿಯನ್ನು 61 ಬಾರಿ ರೋಲ್ ಮಾಡುವುರ ಮೂಲಕ 3ನೇ ವಿಶ್ವ ಧಾಖಲೆ ಮಾಡಿರುತ್ತಾಳೆ. ಇದೇ ಸಂದರ್ಭ ಮತ್ತೊಂದು ಸವಾಲು ಸ್ವೀಕರಿಸಿ ದಾಖಲೆ ನಿರ್ಮಿಸಿರುತ್ತಾಳೆ ಅದುವೇ ಧನುರಾಸನ ಭಂಗಿಯನ್ನು 96 ಬಾರಿ ಒಂದು ನಿಮಿಷ 40 ಸೆಕೆಂಡುಗಳಲ್ಲಿ ಮಾಡಿರುವುದು ಹೆಮ್ಮೆಯ ಸಂಗತಿ. ‘ಬೆಂಗಳೂರಿಗೆ ಒಮ್ಮೆ ಕುಟುಂಬದವರೊಂದಿಗೆ ಹೋಗಿದ್ದಾಗ ಒಂದು ಪತ್ರಿಕಾ ವರದಿಯನ್ನು ಓದಿದೆ. ಅದೆಂದರೆ ಮೈಸೂರಿನ ಖುಷಿ ಎಂಬುವವರು ಯೋಗಾಸನದ ಒಂದು ಭಂಗಿಯನ್ನು ಒಂದು ನಿಮಿಷದಲ್ಲಿ 18 ಬಾರಿ ಮಾಡುವುದರ ಮೂಲಕ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಮಾಡಿದ್ದರು. ನಾನು ಮನೆಗೆ ಹಿಂತಿರುಗಿ ಪ್ರಯತ್ನಸಿದೆ. ಶುರುವಿಗೆ ನನಗೆ 9 ಬಾರಿ ಮಾತ್ರ ಸಾಧ್ಯವಾಯಿತು. ಸತತ ಪ್ರಯತ್ನದ ಫಲವಾಗಿ ನನಗೆ 19 ಬಾರಿ ಒಂದು ನಿಮಿಷದಲ್ಲಿ ಮಾಡಿ ಅವರ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಯಿತು. ಇದೇ ನನ್ನ ಮೊದಲನೇ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸಹಾಯವಾಯಿತು ಎನ್ನುತ್ತಾರೆ ತನುಶ್ರೀ . ಪ್ಯಾಲೆಸ್ತೀನ್‌ ಮೊಹಮ್ಮದ್ ಆಲಿ ಶೇಕ್13ನೇ ವಯಸ್ಸಿನ ಯೋಗಾಸನದ ಒಂದು ಭಂಗಿಯನ್ನು ಒಂದು ನಿಮಿಷದಲ್ಲಿ 38 ಬಾರಿ ಮಾಡುವುದರ ಮೂಲಕ ವರ್ಲ್ಡ್‌ ರೆಕಾರ್ಡ್ ಮಾಡಿದ್ದರು. ನಾನು 42 ಬಾರಿ ಮಾಡುವ ಮೂಲಕ ಈ ರೆಕಾರ್ಡ್ ಬ್ರೇಕ್ ಮಾಡಿದೆ. ಮತ್ತೊಂದು ಖುಷಿಯ ಸಂಗತಿಯೆಂದರೆ 3ನೇ ನನ್ನ ರೆಕಾರ್ಡ್‍ನ್ನು ಇಲ್ಲಿಯವರೆಗೆ ಯಾರೂ ಮುರಿಯಲು ಸಾಧ್ಯವಾಗಿಲ್ಲ. ತನುಶ್ರೀ ತಂದೆ ಉದಯ್ ಕುಮಾರ್ ಮಗಳ ಈ ಸಾಧನೆಯ ಕುರಿತು ಹೆಮ್ಮೆ ಪಡುತ್ತಾ ‘ತನುಶ್ರೀಯ ಮೇಲಿರುವ ದೊಡ್ಡ ಜವಾಬ್ದಾರಿ ಈ ಸಾಧನೆಯನ್ನ ಯಾವ ಸಂದರ್ಭದಲ್ಲಿಯೂ ನಿಲ್ಲಿಸದೆ ಹೆಮ್ಮರವಾಗುವಂತೆ ಬೆಳೆಸುವುದು’ ಎನ್ನುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.