ಇರಾನ್‌ನ ಮಹಿಳಾ ಬಾಕ್ಸರ್‌ಗೆ ಬಂಧನ ಭೀತಿ ಪ್ಯಾರಿಸ್‌: ಹಿಜಬ್‌ ಧರಿಸದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಇರಾನ್‌ನ ಮಹಿಳಾ ಬಾಕ್ಸರ್‌ ಸದಾಫ್‌ ಖದೀಮ್‌ ಅವರಿಗೆ ಬಂಧನ ಭೀತಿ ಎದುರಾಗಿದೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಶನಿವಾರದ ಬೌಟ್‌ನಲ್ಲಿ ಆತಿಥೇಯ ಆ್ಯನಿ ಚೌವಿನ್‌ ಅವರನ್ನು ಸದಾಫ್‌ ಸೋಲಿಸಿದ್ದರು. ಬೌಟ್ ನಂತರ ಪ್ರತಿಕ್ರಿಯಿಸಿದ ಇರಾನ್‌ ಬಾಕ್ಸಿಂಗ್‌ ಫೆಡರೇಷನ್‌, ಚಾಂಪಿಯನ್‌ಷಿಪ್‌ನಲ್ಲಿ ಸದಾಫ್‌ ಫೆಡರೇಷನ್‌ ಪರವಾಗಿ ಕಣಕ್ಕೆ ಇಳಿದಿರಲಿಲ್ಲ, ವೈಯಕ್ತಿಕವಾಗಿ ಪಾಲ್ಗೊಂಡಿದ್ದರು ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ತಕ್ಷಣ ದೇಶಕ್ಕೆ ವಾಪಸಾಗುವಂತೆ ಅವರಿಗೆ ಇರಾನ್‌ ಸೂಚಿಸಿತ್ತು. ವಾಪಸಾಗಲು ಅವರು ಸಜ್ಜಾಗಿದ್ದರು. ಅಷ್ಟರಲ್ಲಿ ಬಂಧನ ವಾರಂಟ್‌ ಹೊರಡಿಸಲಾಗಿದೆ ಎಂದು ಸದಾಫ್‌ ಪ್ರತಿನಿಧಿ ಕ್ಲಾರಾ ಡ್ಯಾಲಿ ತಿಳಿಸಿದ್ದಾರೆ. ಸದಾಫ್‌ ಅವರೊಂದಿಗೆಕೋಚ್‌ ಮೆಹ್‌ಯಾರ್‌ ಮೊನ್ಶಿಪಾರ್‌ ಕೂಡ ಬಂಧನ ಭೀತಿ ಎದುರಿಸುತ್ತಿದ್ದಾರೆ ಎಂದು ಡ್ಯಾಲಿ ವಿವರಿಸಿದ್ದಾರೆ. ಇರಾನ್‌ನಲ್ಲಿ ಮಹಿಳೆಯರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ಬಂಧವಿದೆ. ಹೋರಾಟದ ಬಳಿಕ ಕೆಲವು ವಿಭಾಗಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಹಿಜಬ್ ಧರಿಸಿ ಸ್ಪರ್ಧಿಸಬೇಕು ಮತ್ತು ಮಹಿಳಾ ಕೋಚ್‌ಗಳಿಂದಲೇ ತರಬೇತಿ ಪಡೆಯಬೇಕು ಎಂಬ ಷರತ್ತಿನೊಂದಿಗೆ ಬಾಕ್ಸಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಇರಾನ್ ಸಂಜಾತ, ವಿಶ್ವ ಚಾಂಪಿಯನ್ ಆಗಿದ್ದ ಮೆಹ್‌ಯಾರ್‌ ಮೊನ್ಶಿಪಾರ್‌ ಈಗ ಫ್ರಾನ್ಸ್‌ ಪ್ರಜೆಯಾಗಿದ್ದಾರೆ. ಅವರ ಬಳಿ ತರಬೇತಿ ಪಡೆದದ್ದು ಕೂಡ ತಪ್ಪು ಎಂಬುದು ಫೆಡರೇಷನ್‌ ವಾದ. ತವರಿಗೆ ಹಿಂತಿರುಗಲ್ಲ: ಬಂಧನದ ಭೀತಿ ಹಿನ್ನಲೆಯಲ್ಲಿ, ಇರಾನ್‌ಗೆ ಹಿಂತಿರುಗದೇ ಇರಲು ಖದೀಮ್‌ ನಿರ್ಧರಿಸಿದ್ದು, ಫ್ರಾನ್ಸ್‌ನಲ್ಲೇ ನೆಲೆಸಲು ನಿರ್ಧಾರ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.