ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಅಮಿತ್‌ಗೆ ಬೆಳ್ಳಿ; ರಾಹುಲ್‌ಗೆ ಕಂಚಿನ ಪದಕ ಕ್ಸಿಯಾನ್‌, ಚೀನಾ: ಭಾರತದ ಅಮಿತ್‌ ಧನಕಾರ್ ಮತ್ತು ರಾಹುಲ್ ಅವಾರೆ ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಪುರುಷರ ಫ್ರೀಸ್ಟೈಲ್‌ 74 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಅಮಿತ್‌ ಕಜಕಸ್ತಾನದ ದನಿಯಾರ್ ಕೈಸನೊವ್‌ ಎದುರು 0–5ರಿಂದ ಸೋತರು. 2013ರ ಚಾಂಪಿಯನ್‌ಷಿಪ್‌ನಲ್ಲಿ 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. 28 ವರ್ಷದ, ಹರಿಯಾಣ ಕುಸ್ತಿಪಟು ಟೂರ್ನಿಯ ಅರ್ಹತಾ ಸುತ್ತಿನ ಬೌಟ್‌ನಲ್ಲಿ ಇರಾನ್‌ನ ಮೊಹಮ್ಮದ್ ಅಶ್ಗರ್ ಎದುರು 2–1ರಿಂದ ಗೆದ್ದಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ಯೂಹಿ ಫುಜಿನಮಿ ಅವರ ಕಠಿಣ ಸವಾಲನ್ನು ಮೀರಿ ನಿಂತಿದ್ದರು. ಈ ಬೌಟ್‌ನಲ್ಲಿ ಗಾಯಗೊಂಡಿದ್ದರು. ಆದರೂ ಛಲ ಬಿಡದ ಅವರು ಸೆಮಿಫೈನಲ್‌ನಲ್ಲಿ ಕಿರ್ಗಿಸ್ತಾನದ ಇಲ್ಗಿಸ್‌ ಜಕ್ಯಾಪೆಕೊವ್‌ ವಿರುದ್ಧ ಅಮೋಘ ಸಾಮರ್ಥ್ಯ ತೋರಿ 5–0ಯಿಂದ ಗೆದ್ದಿದ್ದರು. 61 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಬೌಟ್‌ನಲ್ಲಿ ಅವಾರೆ ಕೊರಿಯಾದ ಜಿಂಚೊಲ್‌ ಕಿಮ್‌ ಅವರನ್ನು 9–2ರಿಂದ ಮಣಿಸಿದರು. ಬುಧವಾರ ಗೆದ್ದ ಎರಡು ಪದಕಗಳೊಂದಿಗೆ ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆ ಐದಕ್ಕೇರಿತು. ಇದರಲ್ಲಿ ಒಂದು ಚಿನ್ನ ಮತ್ತು ಎರಡು ಬೆಳ್ಳಿ ಸೇರಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.