ಶೂಟಿಂಗ್‌: ಭಾರತಕ್ಕೆ ಎರಡು ಚಿನ್ನ ಬೀಜಿಂಗ್‌ (ಪಿಟಿಐ): ಭಾರತ ಶೂಟಿಂಗ್ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯ ಮಿಶ್ರ ತಂಡ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದರು. 10 ಮೀ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನು ಭಾಕರ್–ಸೌರಭ್‌ ಸಿಂಗ್‌ ಚೌಧರಿ ಜೋಡಿ ಮತ್ತು 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಅಂಜುಮ್‌ ಮೌದ್ಗಿಲ್–ದಿವ್ಯಾಂಶ್ ಸಿಂಗ್‌ ಪನ್ವಾರ್‌ ಚಿನ್ನ ಗೆದ್ದರು. ಮನು ಭಾಕರ್–ಸೌರಭ್‌ ಸಿಂಗ್‌ ಚೌಧರಿ ಜೋಡಿ ಚೀನಾದ ಜಿಯಾಂಗ್‌ ರನ್‌ಸೀನ್–ಪಾಖಗ್‌ ವೇ ಅವರನ್ನು 16–6ರಿಂದ ಸೋಲಿಸಿತು. 482 ಪಾಯಿಂಟ್ಸ್ ಪಡೆದು ಐದನೇ ಸ್ಥಾನದಲ್ಲಿದ್ದ ಭಾರತದ ಶೂಟರ್‌ಗಳು ಅಂತಿಮ ಘಟ್ಟದಲ್ಲಿ ಗುರಿ ತಪ್ಪದೇ ಚಿನ್ನದ ಪದಕಕ್ಕೆ ಮುತ್ತಿಟ್ಟರು. 10 ಮೀಟರ್ಸ್ ಏರ್‌ ರೈಫಲ್‌ ಸ್ಪರ್ಧೆಯಲ್ಲಿಅಂಜುಮ್‌ –ದಿವ್ಯಾಂಶ್ ಸಿಂಗ್‌ ಪನ್ವಾರ್‌ ಅವರು ಚೀನಾದ ಲಿಯೂ ರುಕ್ಸೌನ್ ಮತ್ತು ಯಾಂಗ್‌ ಹೂರನ್‌ ಅವರನ್ನು 17–15ರಿಂದ ಮಣಿಸಿದರು. 522.7 ಪಾಯಿಂಟ್ಸ್ ಪಡೆದು ಫೈನಲ್‌ನಲ್ಲಿ ಆರನೇ ಸ್ಥಾನದಲ್ಲಿದ್ದ ಭಾರತದ ಈ ಜೋಡಿ ಆರಂಭದಲ್ಲಿ 11–13ರ ಹಿನ್ನಡೆ ಅನುಭವಿಸಿತ್ತು. ಆದರೆ, ಕೊನೆಯ ಸುತ್ತಿನಲ್ಲಿ ನಿಖರ ಗುರಿ ಸಾಧಿಸಿ ಅಂಕ ಹೆಚ್ಚಿಸಿಕೊಂಡು ಚಿನ್ನ ಗೆದ್ದರು. ಹೀನಾ ಸಿಧು ಮತ್ತು ರಿಜ್ವಿ ಶೆಹಜಾರ್ 522.8 ಅಂಕ ಪಡೆದು 12ನೇ ಸ್ಥಾನ ಪಡೆದರು. ಹೀಗಾಗಿ ಪದಕ ಸುತ್ತಿಗೆ ಪ್ರವೇಶ ಪಡೆಯಲಾಗಲಿಲ್ಲ. ‌ಅಪೂರ್ವಿ ಚಾಂಡೇಲಾ ಮತ್ತು ದೀಪಕ್‌ ಕುಮಾರ್‌ ಜೋಡಿಗೂ ನಿರಾಸೆಯಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.