ದಿವ್ಯಾ, ಮಂಜು, ಸೀಮಾಗೆ ಪದಕದ ಭರವಸೆ ಕ್ಷಿಯಾನ್, ಚೀನಾ (ಪಿಟಿಐ): ದಿವ್ಯಾ ಕಕ್ರಾನ್, ಮಂಜು ಕುಮಾರಿ ಮತ್ತು ಸೀಮಾ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ದಿವ್ಯಾ ಮತ್ತು ಮಂಜು ಸೆಮಿಫೈನಲ್ ಬೌಟ್‌ಗಳಲ್ಲಿ ಸೋತು ಕಂಚಿನ ಪದಕಕ್ಕಾಗಿ ಸೆಣಸಲಿದ್ದು ಸೀಮಾ ರೆಪಚೇಜ್‌ ಬೌಟ್‌ನಲ್ಲಿ ಗೆದ್ದು ಕಂಚಿನ ಪದಕದ ಹಣಾಹಣಿಗೆ ಸಜ್ಜಾದರು. ಹಿಂಗಾಲಿನ ನೋವಿನಿಂದಾಗಿ ಕೆಲವು ತಿಂಗಳು ಕಣದಿಂದ ದೂರ ಇದ್ದ ದಿವ್ಯಾ ಇಲ್ಲಿ ಆರಂಭದಿಂದಲೇ ಉತ್ತಮ ಸಾಮರ್ಥ್ಯ ತೋರಿದ್ದರು. 68 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ವಿಯೆಟ್ನಾಂನ ಹಾಂಗ್‌ ತ್ಯೂ ಗ್ಯೆನ್ ಎದುರು 10–0ಯಿಂದ ಗೆದ್ದು ಸಂಭ್ರಮಿಸಿದ್ದರು. ಸೆಮಿಫೈನಲ್‌ನಲ್ಲಿ ಅವರಿಗೆ ಎದುರಾಳಿಯಾಗಿದ್ದವರು ಚೀನಾದ ಫೆಂಗ್ ಜೋ. ಪ್ರಬಲ ಪಟ್ಟುಗಳನ್ನು ಹಾಕಿದ ಚೀನಾ ಕುಸ್ತಿಪಟು ದಿವ್ಯಾ ಅವರನ್ನು 14–4ರಿಂದ ಮಣಿಸಿದರು. ಸೆಮಿಫೈನಲ್‌ ಬೌಟ್‌ನಲ್ಲಿ ಮಂಜು ಮಂಗೋಲಿಯಾದ ಬಟೆಟ್‌ಸೆಗ್‌ ಅಲ್ಟಾಂಟ್ಸೆಗ್‌ ಅವರಿಗೆ 6–15ರಿಂದ ಮಣಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಕಜಕಸ್ತಾನದ ಮದೀನಾ ಬಕ್‌ಬರ್ಗನೋವ ಎದುರು 5–3ರಿಂದ ಗೆಲುವು ಸಾಧಿಸಿದ್ದರು. ಸೀಮಾಗೆ ಒಲಿದ ಅದೃಷ್ಟ: 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಸೀಮಾ ರೆ‍‍ಪ‍ಚೇಜ್ ಬೌಟ್‌ನಲ್ಲಿ ಚೀನಾ ಥೈಪೆಯ ಮೆಂಗ್ ಸಾನ್‌ ಸೀ ಎದುರು 10–2ರಿಂದ ಗೆದ್ದಿದ್ದರು. ಅರ್ಹತಾ ಸುತ್ತಿನಲ್ಲಿ ಅವರು ಜಪಾನ್‌ನ ಯೂಕಿ ಐರಿ ಎದುರು ಸೋತಿದ್ದರು. ಆದರೆ ಯೂಕಿ ಫೈನಲ್‌ ಪ್ರವೇಶಿಸಿದ್ದರಿಂದ ಸೀಮಾ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದರು. ಭಾರತದ ಲಲಿತಾ ಮತ್ತು ಪೂಜಾ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು. ಲಲಿತಾ 55 ಕೆಜಿ ವಿಭಾಗದಲ್ಲಿ ಮತ್ತು ಪೂಜಾ 76 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.