ಬಾಕ್ಸಿಂಗ್: ಸೆಮಿಗೆ ಬಿಷ್ಟ್, ಸೋನಿಯಾ ಬ್ಯಾಂಕಾಕ್‌: ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ. ಸೋಮವಾರ ನಡೆದ 56 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಕವಿಂದರ್ ಸಿಂಗ್‌ ಬಿಷ್ಟ್, ವಿಶ್ವ ಚಾಂಪಿಯನ್, ಕಜಕಸ್ತಾನದ ಖೈರತ್‌ ಎರಲಿಯೇವ್‌ ಅವರನ್ನು ಮಣಿಸಿದರು. ಪ್ರಾರಂಭದಲ್ಲಿ ಕಜಕ್‌ ಬಾಕ್ಸರ್‌ ಎದುರು ಬಿಷ್ಟ್ ಹೋರಾಟ ಸಪ್ಪೆ ಯಾಗಿತ್ತು. ಎರಡನೇ ಸುತ್ತಿನಲ್ಲಿ ಪ್ರಬಲ ಪಂಚ್‌ಗಳ ಮೂಲಕ ಮಿಂಚಿದರು. ಪುರುಷರ 52 ಕೆ.ಜಿ ವಿಭಾಗದಲ್ಲಿ ಅಮಿತ್‌ ಪಂಗಲ್ ಅವರು ಉಜ್ಬೆಕಿಸ್ತಾನದ ಹಸನ್‌ಬೊಯ್‌ ದುಸ್ಮತೊವ್‌ ಅವರನ್ನು 3–2ರಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶ ಪಡೆದರು. ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಸೋನಿಯಾ ಚಾಹಲ್‌ ಕೊರಿಯಾದ ಜೊ ಸೊನ್‌ ಹ್ವಾ ಅವರನ್ನು 5–0ಯಿಂದ ಸೋಲಿಸಿದರು. ದೀಪಕ್‌ ನೇರ‍ಪ್ರವೇಶ: 49 ಕೆ.ಜಿ ವಿಭಾಗದಲ್ಲಿ ಅಫ್ಗಾನಿಸ್ಥಾನದ ರಮೀಶ್‌ ರೆಹಮಾನಿ ಗಾಯಗೊಂಡಿದ್ದರಿಂದ ದೀಪಕ್ ಸಿಂಗ್‌ ನೇರವಾಗಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು. ಸೀಮಾ ಪೂನಿಯಾ, ರೋಹಿತ್‌ ಟೋಕಸ್‌ಗೆನಿರಾಸೆ: ಮಹಿಳೆಯರ 81 ಕೆ.ಜಿ ವಿಭಾಗದಲ್ಲಿ ಸೀಮಾ ಪೂನಿಯಾ ಅವರು ಚೀನಾದ ಯಾಂಗ್‌ ಕ್ಸಿಯೊಲಿ ಎದುರು 2–3ರಿಂದ ಸೋತರೆ, ಪುರುಷರ 64 ಕೆ.ಜಿ ವಿಭಾಗದಲ್ಲಿ ರೋಹಿತ್‌ ಟೋಕಸ್‌ 2–3ರಿಂದ ಮಂಗೋಲಿಯಾದ ಚಿನ್‌ಜೋರಿಗ್‌ ಬಾತರ್‌ಸುಕ್ ಅವರಿಗೆ ಸೋತು ನಿರಾಸೆ ಅನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.