ಆಟೋ ಡ್ರೈವರ್ ಮಗಳ ವಿಶ್ವ ಸಾಧನೆ ಆಟೊ ಚಾಲಕನ ಪುತ್ರಿ ಎಂ.ಆರ್‌.ಧನುಷಾ ಮತ್ತೊಂದು ಸಾಧನೆಯ ಹೆಜ್ಜೆ ಇಟ್ಟಿದ್ದಾರೆ. ಆರ್ಥಿಕ ಮುಗ್ಗಟ್ಟಿನ ನಡುವೆಯೇ ಗುರಿ ಬೆನ್ನಟ್ಟಿದ್ದಾರೆ. ಇಟಲಿಯ ನಪೋಲಿಯಲ್ಲಿ ನಡೆಯಲಿರುವ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. 19 ವರ್ಷ ವಯಸ್ಸಿನ ಅವರು ಮೈಸೂರು ವಿ.ವಿಯಿಂದ ಆಯ್ಕೆಯಾಗಿರುವ ಏಕೈಕ ಅಥ್ಲೀಟ್. ಅಷ್ಟೇ ಅಲ್ಲ; ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ವಿಶ್ವವಿದ್ಯಾಲಯದ ಮೊದಲ ಅಥ್ಲೀಟ್‌ ಕೂಡ. ಜುಲೈ 3ರಂದು ಆರಂಭವಾಗಲಿರುವ ಕ್ರೀಡಾಕೂಟಕ್ಕೆ ರಾಜ್ಯದಿಂದ ನಾಲ್ವರು ತೆರಳಲಿದ್ದಾರೆ.ಇನ್ನುಳಿದ ಮೂವರು ಮಂಗಳೂರು ವಿ.ವಿ ಸ್ಪರ್ಧಿಗಳು. ಹೆಪ್ಟಥ್ಲಾನ್‌ನಲ್ಲಿ ಧನುಷಾ ಸ್ಪರ್ಧಿಸಲಿದ್ದಾರೆ. ಒಡಿಶಾದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಮಾನದಂಡ ಪೂರೈಸಿ ಸ್ಥಾನ ಗಿಟ್ಟಿಸಿದ್ದಾರೆ. ತಂದೆ ಮಂಜು ಅವರು ಕೆ.ಆರ್‌.ನಗರದಲ್ಲಿ ಆಟೊ ಚಾಲಕ. ನಿತ್ಯ ರಾತ್ರಿ 11 ಗಂಟೆಯವರೆಗೆ ಆಟೊ ಚಾಲನೆ ಮಾಡಿ ಕುಟುಂಬ ಹಾಗೂ ಪುತ್ರಿಯ ಕ್ರೀಡಾ ಜೀವನ ನಿಭಾಯಿಸುತ್ತಿದ್ದಾರೆ. ತಾಯಿ ರುಕ್ಮಿಣಿ ಗೃಹಿಣಿ. ಧನುಷಾ ಈಗಾಗಲೇ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ್ದಾರೆ. ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಪ್ರಥಮ ಬಿಬಿಎನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಎಂ.ಪುನೀತ್‌ ಇವರ ಕೋಚ್‌. ಈಚೆಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ ಹೆಪ್ಟಥ್ಲಾನ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರು. ಕೊಯಮತ್ತೂರಿನಲ್ಲಿ ನಡೆದ ಫೆಡರೇಷನ್‌ನ್‌ ಕಪ್‌ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಜಪಾನ್‌ನಲ್ಲಿ ನಡೆದ ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ‘ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದು ನಿಜ. ನವದೆಹಲಿಯಿಂದ ಇಟಲಿಗೆ ಹೋಗಿ ಬರಲು ವಿಶ್ವವಿದ್ಯಾಲಯ ಹಣಕಾಸಿನ ವ್ಯವಸ್ಥೆ ಮಾಡಿದೆ. ಆದರೆ, ವೀಸಾ ಮಾಡಿಸಿಕೊಳ್ಳಲು, ಒಡಿಶಾದಲ್ಲಿ ತರಬೇತಿ ಶಿಬಿರಕ್ಕೆ ಹೋಗಲು ಹಾಗೂ ಪೋಷಕ ಆಹಾರಕ್ಕೆ ಹಣಕಾಸಿನ ಸಮಸ್ಯೆ ಇದೆ. ಕಳೆದ ಬಾರಿ ಅಮ್ಮ ಮಹಿಳಾ ಸಂಘದಲ್ಲಿ ಸಾಲ ಮಾಡಿ ಕ್ರೀಡಾಕೂಟಕ್ಕೆ ಕಳಿಸಿದ್ದರು’ ಎಂದು ಧನುಷಾ ಹೇಳುತ್ತಾರೆ. ಇವರ ಅಕ್ಕ ಎಂ.ಆರ್‌.ಅನುಷಾ ಕೂಡ ಕ್ರೀಡಾಪಟು. ಅವರಿಂದ ಸ್ಫೂರ್ತಿ ಪಡೆದು 12ನೇ ವಯಸ್ಸಿನಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಶುರು ಮಾಡಿದರು. ಆರಂಭದಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಆ ನಂತರ ಮೈಸೂರಿಗೆ ವಾಪಸ್‌ ಆದರು. ವಿಶೇಷವೆಂದರೆ ದೇಶದಲ್ಲಿ 20 ವರ್ಷದೊಳಗಿನವರ ವಿಭಾಗದಲ್ಲಿ ಹೆಪ್ಟಥ್ಲಾನ್‌ನಲ್ಲಿ ಧನುಷಾ ಮೊದಲ ಸ್ಥಾನದಲ್ಲಿದ್ದಾರೆ. ಜಾರ್ಖಂಡ್‌ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಹೆಪ್ಟಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದಾರೆ. ಮೈಸೂರು ವಿ.ವಿ ಅಂತರ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ ಹೆಪ್ಟಥ್ಲಾನ್‌ ಹಾಗೂ ಲಾಂಗ್‌ಜಂಪ್‌ನಲ್ಲಿ ದಾಖಲೆ ಹೊಂದಿದ್ದಾರೆ. ‘ನಿತ್ಯ ಎಂಟು ತಾಸು ಅಭ್ಯಾಸ ನಡೆಸುತ್ತೇನೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತಕ್ಕಾಗಿ ಪದಕ ಗೆಲ್ಲಬೇಕು ಎಂಬುದು ನನ್ನ ಗುರಿ’ ಎಂದು ತಮ್ಮ ಕನಸು ಬಿಚ್ಚಿಡುತ್ತಾರೆ. ಹೆಪ್ಟಥ್ಲಾನ್‌ ಕುರಿತು ಅಥ್ಲೀಟ್‌ ಧನುಷಾ ಅವರು ಹೆಪ್ಟಥ್ಲಾನ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇದು 200 ಮೀ., 800 ಮೀ. ಓಟ, 100 ಮೀ. ಹರ್ಡಲ್ಸ್‌, ಷಾಟ್‌ಪಟ್‌, ಜಾವೆಲಿನ್‌ ಥ್ರೋ, ಹೈಜಂಪ್‌, ಲಾಂಗ್‌ಜಂಪ್‌ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಏಳು ಸ್ಪರ್ಧೆಯ ಪಾಯಿಂಟ್ಸ್‌ ಪರಿಗಣಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. * ಪೋಷಕರ ಪ್ರೋತ್ಸಾಹ, ವಿ.ವಿ, ಕ್ರೀಡಾ ಹಾಸ್ಟೆಲ್‌ನ ಬೆಂಬಲ, ಕೋಚ್‌ ಸಹಕಾರ ಈ ಹಂತಕ್ಕೆ ತಂದು ನಿಲ್ಲಿಸಿದೆ. ಮತ್ತಷ್ಟು ಪ್ರಯತ್ನ ಹಾಕಲು ಪ್ರೇರಕವಾಗಿದೆ – ಎಂ.ಆರ್‌.ಧನುಷಾ, ಅಥ್ಲೀಟ್‌ * ಬಡತನದಲ್ಲಿ ಬೆಳೆದಿರುವ ಪ್ರತಿಭಾವಂತ ಅಥ್ಲೀಟ್‌ ಧನುಷಾಗೆ ಉತ್ತಮ ಭವಿಷ್ಯವಿದೆ. ಇಟಲಿಗೆ ತೆರಳಲು ಮೈಸೂರು ವಿ.ವಿಯಿಂದ ₹ 2.26 ಲಕ್ಷ ನೀಡುತ್ತಿದ್ದೇವೆ – ಡಾ.ಪಿ.ಕೃಷ್ಣಯ್ಯ, ನಿರ್ದೇಶಕ, ಮೈಸೂರು ವಿ.ವಿ ಕ್ರೀಡಾ ವಿಭಾಗ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.