ಹೆಗಲಿನ ದೃಢತೆಗೆ ಪೂರ್ವೋತ್ತಾನಾಸನ ಪೂರ್ವ ಎಂದರೆ ದಿಕ್ಕು. ಆಸನ ಅಭ್ಯಾಸದಲ್ಲಿ ಪಾದಾಂಗುಷ್ಠದಿಂದ ಹಣೆಯವರೆಗಿನ ಮುಂಭಾಗವನ್ನು ಪೂರ್ವಭಾಗ ಎಂದು ಪರಿಗಣಿಸಲಾಗಿದೆ. ಉತ್ತಾನ ಎಂದರೆ ಹಿಗ್ಗಿಸು ಎಂದರ್ಥ. ಇಲ್ಲಿ ದೇಹದ ಮುಂಭಾಗವು ಹಿಗ್ಗಿಸಿಟ್ಟು ಅಭ್ಯಾಸ ನಡೆಯುವುದರಿಂದ ಪೂರ್ವೋತ್ತಾನಾಸನ ಎಂದು ಹೆಸರಿಸಲಾಗಿದೆ. ಅಭ್ಯಾಸಕ್ರಮ ಕಾಲುಗಳನ್ನು ಚಾಚಿಟ್ಟು ನೆಲದ ಮೇಲೆ ಕುಳಿತುಕೊಳ್ಳಿ. ಅಂಗೈಗಳನ್ನು ಸೊಂಟದ ಪಕ್ಕ ನೆಲಕ್ಕೂರಿಡಿ. ಕೈಬೆರಳುಗಳು ಪಾದದತ್ತ ಮುಖ ಮಾಡಿರಲಿ. ಬಳಿಕ, ದೇಹದ ಭಾರವನ್ನು ಅಂಗೈಗಳು ಮತ್ತು ಪಾದಗಳಿಗೆ ವಹಿಸಿ. ಉಸಿರನ್ನು ಹೊರಹಾಕುತ್ತಾ ದೇಹವನ್ನು ನೆಲದಿಂದ ಮೇಲೆತ್ತಿ. ಕಾಲುಗಳು ಮತ್ತು ತೋಳುಗಳನ್ನು ನೇರಗೊಳಿಸಿ, ಮಂಡಿ ಮತ್ತು ಮೊಳಕೈಗಳನ್ನು ಬಿಗಿಗೊಳಿಸಿ. ಹೆಗಲಿನಿಂದ ಮಣಿಕಟ್ಟಿನವರೆಗಿನ ತೋಳುಗಳು ನೆಲಕ್ಕೆ ಲಂಭವಾಗಿರುವಂತೆಯೂ, ವಸ್ತಿಕುಹರದಿಂದ ಹೆಗಲಿನ ಲಂಬ ಮುಂಡವನ್ನು ನೆಲಕ್ಕೆ ಸಮಾನಾಂತರವಾಗಿರಿಸಿ. ಕುತ್ತಿಗೆಯನ್ನು ಹಿಗ್ಗಿಸಿ ತಲೆಯನ್ನು ಸಾಧ್ಯವಾದಷ್ಟು ಹಿಂದಕ್ಕೆ ಚಾಚಿಟ್ಟು, ದೃಷ್ಟಿ ಮೇಲೆಕ್ಕೆ ನೋಡುತ್ತಿರಲಿ. ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ ಒಂದು ನಿಮಿಷ ನೆಲೆಸಿ. ಅವರೋಹಣ ಮಾಡುವಾಗ ದೇಹವನ್ನು ನಿಧಾನವಾಗಿ ಕೆಳಕ್ಕಿಳಿಸಿಟ್ಟು ವಿರಮಿಸಿ. ಫಲಗಳು ಹೆಗಲಿನ ಕೀಲುಗಳ ಸರಿಯಾದ ಕಾರ್ಯಕ್ಕೆ ಸಹಕಾರಿ. ಕೈಗಳ ಮಣಿಕಟ್ಟು ಹಾಗೂ ಕಾಲಿನ ಹರಡಗಳು ಬಲಗೊಳ್ಳುತ್ತವೆ. ಮುಂದೆ ಬಾಗಿ ಅಭ್ಯಾಸಿಸುವ ಆಸನಗಳಿಂದ ಉಂಟಾಗುವ ಆಸಯಾಸ ಅಥವಾ ಹೆಚ್ಚು ಹೊತ್ತು ಮುಂದೆ ಬಾಗಿ ಕೆಲಸಗಳನ್ನು ಮಾಡಿದಾಗ ಆಗುವ ಬಳಲಿಕೆಯನ್ನು ದೂರವಾಗಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.