25 ನಿಮಿಷಗಳವರೆಗೆ ‘ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್’: ದಾಖಲೆ ಬರೆದ ಕೈಗಾದ ಬಾಲಕ ಕಾರವಾರ:ತಾಲ್ಲೂಕಿನ ಕೈಗಾದ ಐದು ವರ್ಷದ ಬಾಲಕ ಮೊಹಮ್ಮದ್ ಸಾಖೀಬ್, ಸತತ 25 ನಿಮಿಷಗಳವರೆಗೆ ‘ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್’ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ನಗರದ ಹೋಟೆಲ್ ಅಜ್ವಿ ಓಷಿ ಯನ್‌ನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಈತ ಈ ಸಾಧನೆ ಮಾಡಿದ್ದಾನೆ. ಸ್ಕೇಟಿಂಗ್‌ ಶೂಗಳನ್ನು ಧರಿಸಿ, ಮುಂದಕ್ಕೆ ಬಾಗಿ ಒಂದು ಸಾವಿರಕ್ಕೂ ಅಧಿಕ ಸುತ್ತುಗಳನ್ನು ವೃತ್ತಾಕಾರದಲ್ಲಿ ತಿರುಗಿ ನೆರೆದವರ ಗಮನ ಸೆಳೆದ. ದಾಖಲೆ ಘೋಷಣೆ: ವೀಕ್ಷಕರಾಗಿ ಬಂದಿದ್ದ ರೆಕಾರ್ಡ್‌ ಹೋಲ್ಡರ್ಸ್‌ ರಿಪಬ್ಲಿಕ್‌ ಯುಕೆಯ ಮುಖ್ಯಸ್ಥ ಪ್ರಸಾದ್ ಗಾವಡೆ, ಹೈರೇಂಜ್ ಆಫ್ ಬುಕ್ ರೆಕಾರ್ಡ್ಸ್‌ನ ಬಸವರಾಜ್ ಜಿ., ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿ ಯನ್ ಬುಕ್ ಆಫ್ ರೆಕಾರ್ಡ್ಸ್‌ನ ಹರೀಶ್ ಅವರು ಸಾಖೀಬ್‌ನ ದಾಖಲೆಯನ್ನು ಘೋಷಿಸಿದರು. ಜತೆಗೆ, ಪ್ರಮಾಣ ಪತ್ರ ವಿತರಿಸಿ ಶ್ಲಾಘಿಸಿದರು. ‘ಸಾಖೀಬ್ಮಾಡಿರುವ ದಾಖಲೆ ಹೆಮ್ಮೆ ಎನಿಸುತ್ತಿದೆ. ನಿಯಮಾವಳಿಯ ಪ್ರಕಾರ 16 ನಿಮಿಷಗಳವರೆಗೆಲಿಂಬೋ ಸ್ಕೇಟಿಂಗ್‌ಮಾಡುತ್ತ ಸುತ್ತುಗಳನ್ನು ವೃತ್ತಾಕಾರದಲ್ಲಿ ತಿರುಗಬೇಕಿತ್ತು. ಆದರೆ, ಈತ 25 ನಿಮಿಷಗಳವರೆಗೆ ಸತತವಾಗಿ ಸುತ್ತಿ ದಾಖಲೆ ಬರೆದಿದ‌್ದಾನೆ’ ಎಂದು ವೀಕ್ಷಕಹರೀಶ್ ತಿಳಿಸಿದರು. ‘ಸಾಖೀಬ್‌ನ ಈ ಸಾಧನೆಯ ಪ್ರದರ್ಶನವನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ.ಅದನ್ನು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಸಂಸ್ಥೆಗೆ ಕಳುಹಿಸಿಕೊಡಲಾಗುವುದು’ ಎಂದು ತರಬೇತುದಾರ ದಿಲೀಪ್‌ ಹಣಬರ ಹೇಳಿದರು. ಐದು ವರ್ಷದ ಬಾಲಕ: ಸಾಖೀಬ್‌ಗೆ ಈಗ ಕೇವಲ ಐದು ವರ್ಷ. ಯುಕೆಜಿಯಲ್ಲಿ ಓದುತ್ತಿದ್ದಾನೆ. ಕಳೆದ ಮೂರು ವರ್ಷಗಳಿಂದ ಕೈಗಾ ರೋಲರ್ಸ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದ. ದಿನಕ್ಕೆ ಎರಡರಿಂದ ಮೂರು ತಾಸುಗಳ ಕಾಲ ಈತನಿಗೆ ತರಬೇತಿ ನೀಡಲಾಗುತ್ತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.