ಗುರುಪ್ರೀತ್‌, ಸುನೀಲ್‌ಗೆ ಬೆಳ್ಳಿ ಪದಕ ಕ್ಸಿಯಾನ್‌, ಚೀನಾ: ಭಾರತದ ಗುರುಪ್ರೀತ್‌ ಸಿಂಗ್‌ ಮತ್ತು ಸುನೀಲ್ ಕುಮಾರ್‌ ಅವರು ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದ್ದಾರೆ. ಶನಿವಾರ ನಡೆದ ಪುರುಷರ ಗ್ರೀಕೊ ರೋಮನ್‌ ಸ್ಪರ್ಧೆಯ 77 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಗುರುಪ್ರೀತ್‌ 0–8 ಪಾಯಿಂಟ್ಸ್‌ನಿಂದ ದಕ್ಷಿಣ ಕೊರಿಯಾದ ಕಿಮ್‌ ಹೈವೊನ್‌ವೂ ಎದುರು ಪರಾಭವಗೊಂಡರು. ಕ್ವಾರ್ಟರ್‌ ಫೈನಲ್‌ನಲ್ಲಿ 10–0ಯಿಂದ ಕತಾರ್‌ನ ಬಖಿತ್‌ ಶರೀಫ್‌ ಕೆ. ಬದರ್‌ ಅವರನ್ನು ಮಣಿಸಿದ್ದ ಗುರುಪ್ರೀತ್‌, ನಾಲ್ಕರ ಘಟ್ಟದ ಹಣಾಹಣಿಯಲ್ಲಿ 6–5ಯಿಂದ ಕಜಕಸ್ತಾನದ ತಮರ್ಲಾನ್‌ ಶಡುಕಯೆವ್‌ ವಿರುದ್ಧ ಗೆದ್ದಿದ್ದರು. 87 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸುನೀಲ್‌, ಇರಾನ್‌ನ ಹುಸೇನ್‌ ಅಹಮದ್‌ ನೌರಿ ಎದುರು ಮಣಿದರು. ಕ್ವಾರ್ಟರ್‌ ಫೈನಲ್‌ನಲ್ಲಿ 14–7ರಿಂದ ತಜಿಕಿಸ್ತಾನದ ತೊಖಿರ್ದ್‌ಜೋನ್‌ ಒಖೊನೊವ್‌ ಎದುರು ಗೆದ್ದಿದ್ದ ಸುನೀಲ್‌, ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಅಜಮತ್‌ ಕುಸ್ತುಬಯೆವ್‌ ಎದುರು ಗೆದ್ದಿದ್ದರು. 130 ಕೆ.ಜಿ. ವಿಭಾಗದ ಕಂಚಿನ ಪದಕದ ‘ಪ್ಲೇ ಆಫ್’ನಲ್ಲಿ ಭಾರತದ ಪ್ರೇಮ್‌ ಅವರು ಕಜಕಸ್ತಾನದ ದಮಿರ್‌ ಕುಜೆಮ್‌ಬಯೆಮ್‌ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.