ಅಭಿಷೇಕ್‌ಗೆ ಟೋಕಿಯೊ ರಹದಾರಿ ಬೀಜಿಂಗ್‌ (ಪಿಟಿಐ): ಭಾರತದ ಶೂಟರ್‌ ಅಭಿಷೇಕ್‌ ವರ್ಮಾ ಅವರು ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ರಹದಾರಿ ಪಡೆದಿದ್ದಾರೆ. ಶನಿವಾರ ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದು ಈ ಸಾಧನೆ ಮಾಡಿದ್ದಾರೆ. ಅಭಿಷೇಕ್‌ ಅವರು ಟೋಕಿಯೊ ಟಿಕೆಟ್‌ ಪಡೆದ ಭಾರತದ ಐದನೇ ಶೂಟರ್‌ ಆಗಿದ್ದಾರೆ. ಅಂಜುಮ್‌ ಮೋದ್ಗಿಲ್‌, ಅಪೂರ್ವಿ ಚಾಂಡೇಲಾ (ಇಬ್ಬರೂ 10 ಮೀಟರ್ಸ್‌ ಏರ್‌ ರೈಫಲ್‌), ಸೌರಭ್‌ ಚೌಧರಿ (10 ಮೀ. ಏರ್‌ ಪಿಸ್ತೂಲ್‌) ಮತ್ತು ದಿವ್ಯಾಂಶ್‌ ಸಿಂಗ್‌ ಪನ್ವರ್‌ (10 ಮೀ. ಏರ್‌ ರೈಫಲ್‌) ಮೊದಲು ಈ ಸಾಧನೆ ಮಾಡಿದ್ದರು. ವಿಶ್ವಕಪ್‌ನಲ್ಲಿ ಎರಡನೇ ಸಲ ಭಾಗವಹಿಸಿದ್ದ ಅಭಿಷೇಕ್‌ ಅವರು ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಫೈನಲ್‌ನಲ್ಲಿ ಭಾರತದ ಶೂಟರ್‌ ಒಟ್ಟು 242.7 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ನವದೆಹಲಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅವರು ಚೊಚ್ಚಲ ಬಾರಿಗೆ ಸ್ಪರ್ಧಿಸಿದ್ದರು. ಆಗ ಫೈನಲ್‌ ಪ್ರವೇಶಿಸಲು ವಿಫಲರಾಗಿದ್ದರು. ಎಂಟು ಮಂದಿ ಇದ್ದ ಫೈನಲ್‌ನಲ್ಲಿ ಅಭಿಷೇಕ್‌ ಅವರು ಆರಂಭದಿಂದಲೇ ನಿಖರ ಗುರಿ ಹಿಡಿದರು. ಮೊದಲ ಹಂತದ ಐದು ಅವಕಾಶಗಳಿಂದ ಅವರು ಒಟ್ಟು 50.4 ಪಾಯಿಂಟ್ಸ್‌ ಕಲೆಹಾಕಿದರು. ನಂತರದ ಐದು ಅವಕಾಶಗಳಲ್ಲೂ ನಿಖರ ಗುರಿ ಹಿಡಿದರು. ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 101.4ಕ್ಕೆ ಹೆಚ್ಚಿಸಿಕೊಂಡರು. ಎರಡನೇ ಹಂತದ ಮೊದಲ ಎರಡು ಅವಕಾಶಗಳಲ್ಲಿ ಕ್ರಮವಾಗಿ 10.3 ಮತ್ತು 10.5 ಪಾಯಿಂಟ್ಸ್‌ ಕಲೆಹಾಕಿದ ಅಭಿಷೇಕ್‌, ನಂತರವೂ ಏಕಾಗ್ರತೆ ಕಾಪಾಡಿಕೊಂಡು ಪಾಯಿಂಟ್ಸ್‌ ಬೇಟೆ ಮುಂದುವರಿಸಿದರು. ಎರಡನೇ ಹಂತದ ಆರು ಅವಕಾಶಗಳು ಮುಗಿದಾಗ ಅಭಿಷೇಕ್‌ ಖಾತೆಯಲ್ಲಿ 162.3 ಪಾಯಿಂಟ್ಸ್‌ ಇದ್ದವು. ದಕ್ಷಿಣ ಕೊರಿಯಾದ ಸೆವುಂಗ್‌ವೂ ಹಾನ್‌ (161.3) ಮತ್ತು ರಷ್ಯಾದ ಅರ್ಟೆಮ್‌ ಚೆರ್ನೌಸೊವ್ (159.8) ಅವರು ಭಾರತದ ಶೂಟರ್‌ಗೆ ಪ್ರಬಲ ಪೈಪೋಟಿ ಒಡ್ಡಿದ್ದರು. ನಿರ್ಣಾಯಕ ಎನಿಸಿದ್ದ ಕೊನೆಯ ಎಂಟು ಅವಕಾಶಗಳಲ್ಲೂ ಮೋಡಿ ಮಾಡಿದ ಅಭಿಷೇಕ್ ಸಂಭ್ರಮಿಸಿದರು. 240.4 ಪಾಯಿಂಟ್ಸ್‌ ಕಲೆಹಾಕಿದ ಅರ್ಟೆಮ್‌ ಬೆಳ್ಳಿಯ ಪದಕ ಜಯಿಸಿದರು. ಹಾನ್‌ ಅವರು (220.0 ಪಾ.) ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದಕ್ಕೂ ಮೊದಲು ನಡೆದಿದ್ದ ಅರ್ಹತಾ ಹಂತದ ಸ್ಪರ್ಧೆಯಲ್ಲಿ ಅಭಿಷೇಕ್‌ 585 ಪಾಯಿಂಟ್ಸ್‌ ಕಲೆಹಾಕಿದ್ದರು. ನಾಲ್ಕನೇ ಸ್ಪರ್ಧಿಯಾಗಿ ಫೈನಲ್‌ ಪ್ರವೇಶಿಸಿದ್ದರು. ಇದೇ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಶಹಜಾರ್‌ ರಿಜ್ವಿ ಮತ್ತು ಅರ್ಜುನ್‌ ಸಿಂಗ್‌ ಚೀಮಾ ಅವರು ಫೈನಲ್‌ ಪ್ರವೇಶಿಸಲು ವಿಫಲರಾದರು. ಅರ್ಹತಾ ಹಂತದಲ್ಲಿ ಇವರು ಕ್ರಮವಾಗಿ 32 ಮತ್ತು 54ನೇ ಸ್ಥಾನಗಳನ್ನು ಪಡೆದರು. ಅಭಿಷೇಕ್‌ ಅವರು ಈ ಸಲದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.