ಬ್ಯಾಡ್ಮಿಂಟನ್: ಫೈನಲ್‌ಗೆ ಆಕರ್ಷಿ ಕಶ್ಯಪ್, ಕಿರಣ್ ಜಾರ್ಜ್ ಬೆಂಗಳೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತಂಡ ವನ್ನು ಪ್ರತಿನಿಧಿಸುವ, ಬೆಂಗಳೂರಿನ ಆಕರ್ಷಿ ಕಶ್ಯಪ್ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಆಶ್ರಯದಲ್ಲಿ ನಡೆಯು ತ್ತಿರುವಅಖಿಲ ಭಾರತ ಸೀನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಆಕರ್ಷಿ ಕಶ್ಯಪ್ 18–21, 21–13, 22–20 ರಿಂದ ಏರ್ ಇಂಡಿಯಾದ ಶಿಖಾ ಗೌತಮ್ ವಿರುದ್ಧ ಜಯಿಸಿದರು. ಕಿರಣ್ ಫೈನಲ್‌ಗೆ: ಕೇರಳದ ಕಿರಣ್ ಜಾರ್ಜ್ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ 17-21, 21-17, 21-19 ರಿಂದ ಎಎಐನ ಚಿರಾಗ್ ಸೇನ್ ವಿರುದ್ಧ ಗೆದ್ದರು. ಇನ್ನೊಂದು ಸೆಮಿಯಲ್ಲಿ ರಾಹುಲ್ ಯಾದವ್ 22–20, 23–21 ರಿಂದ ಹರ್ಷಿಲ್ ದಾನಿ ವಿರುದ್ಧ ಗೆದ್ದರು. ಮಹಿಳೆಯರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಕರ್ನಾಟಕದ ಶಿಖಾ ಗೌತಮ್ ಮತ್ತು ಅಶ್ವಿನಿ ಭಟ್ 18–21, 21–16, 21–16ರಿಂದ ಮಹಾರಾಷ್ಟ್ರದ ಸಿಮ್ರನ್ ಸಿಂಗಿ ಮತ್ತು ರಿತಿಕಾ ಠಾಕರ್ ಜೋಡಿ ಯನ್ನು ಸೋಲಿಸಿ ಫೈನಲ್‌ ಪ್ರವೇಶಿಸಿತು. ಅಭೇಷೇಕ್‌, ಮಿಶಾಗೆ ನಿರಾಸೆ: ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ಅಭಿಷೇಕ್‌‌ ಎಲಿಗಾರ್‌ 19–21, 15–21ರಿಂದ ಕಿರಣ್‌ ಜಾರ್ಜ್ ಅವರಿಗೆ ಮಣಿದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಋತ್ ಮಿಶಾ ಆಕರ್ಷಿ ಕಶ್ಯಪ್‌ ವಿರುದ್ಧ ಸೋತರು. ಫೈನಲ್‌ ಪಂದ್ಯಗಳು ವಸಂತನಗರದ ಕೆಬಿಎ ಅಂಗಳದಲ್ಲಿ ಭಾನುವಾರ ಬೆಳಗ್ಗೆ 10ಕ್ಕೆ ಆರಂಭವಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.