ಕಿರಣ್, ಆಕರ್ಷಿಗೆ ಪ್ರಶಸ್ತಿ ಬೆಂಗಳೂರು: ಅಮೋಘ ಆಟ ಆಡಿದ ಆಕರ್ಷಿ ಕಶ್ಯಪ್‌ ಮತ್ತು ಕಿರಣ್ ಜಾರ್ಜ್‌ ಅವರು ಅಖಿಲ ಭಾರತ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ ವಿಭಾಗಗಳ ಪ್ರಶಸ್ತಿ ಗೆದ್ದರು. ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಏರ್‌ಪೋರ್ಟ್ಸ್‌ ಅಥಾರಿಟಿ ಆಫ್ ಇಂಡಿಯಾದ (ಎಎಐ) ಆಕರ್ಷಿ 21–13, 21–14 ನೇರ ಗೇಮ್‌ಗಳಿಂದ ರೈಲ್ವೇಸ್‌ನ ರಿಯಾ ಮುಖರ್ಜಿ ಅವರನ್ನು ಸೋಲಿಸಿದರು. ಸೀನಿಯರ್‌ ವಿಭಾಗದಲ್ಲಿ ಆಕರ್ಷಿ ಜಯಿಸಿದ ಚೊಚ್ಚಲ ಪ್ರಶಸ್ತಿ ಇದಾಗಿದೆ. ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಆಕರ್ಷಿ ಎರಡು ಗೇಮ್‌ಗಳಲ್ಲೂ ದಿಟ್ಟ ಆಟ ಆಡಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ರಿಯಾ ಅವರನ್ನು ಕಂಗೆಡಿಸಿದರು. ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಕೇರಳದ ಕಿರಣ್‌ ಜಾರ್ಜ್‌ 18–21, 21–9, 21–18ರಲ್ಲಿ ತೆಲಂಗಾಣದ ರಾಹುಲ್‌ ಯಾದವ್‌ ಎದುರು ಗೆದ್ದರು. ಶಿಖಾ–ಅಶ್ವಿನಿಗೆ ಕಿರೀಟ: ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಭಟ್‌ ಮತ್ತು ಏರ್‌ ಇಂಡಿಯಾದ ಶಿಖಾ ಗೌತಮ್‌ ಚಾಂಪಿಯನ್‌ ಆದರು. ಫೈನಲ್‌ನಲ್ಲಿ ಅಶ್ವಿನಿ ಮತ್ತು ಶಿಖಾ 21–11, 21–17ರಲ್ಲಿ ಒಡಿಶಾದ ರುತುಪರ್ಣ ಪಾಂಡ ಮತ್ತು ತೆಲಂಗಾಣದ ಕೆಯುರಾ ಮೊಪಾತಿ ಎದುರು ಗೆದ್ದರು. ಪುರುಷರ ಡಬಲ್ಸ್‌ ವಿಭಾಗದ ಪ್ರಶಸ್ತಿ ಜಿ.ಕೃಷ್ಣಪ್ರಸಾದ್‌ ಮತ್ತು ಧ್ರುವ ಕಪಿಲಾ ಅವರ ಪಾಲಾಯಿತು. ಅಂತಿಮ ಘಟ್ಟದ ಹಣಾಹಣಿಯಲ್ಲಿ ಕೃಷ್ಣಪ್ರಸಾದ್‌ ಮತ್ತು ಧ್ರುವ 21–18, 21–18ರಲ್ಲಿ ಕೆ.ಟಿ.ರೂಪೇಶ್‌ ಕುಮಾರ್‌ ಮತ್ತು ವಿ.ದಿಜು ಅವರನ್ನು ಮಣಿಸಿದರು. ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಧ್ರುವ ಕ‍ಪಿಲಾ ಮತ್ತು ರುತುಪರ್ಣ ಪಾಂಡ 21–13, 21–19ರಲ್ಲಿ ಸಂಗ್ರಾಮ್‌ ಚುಟಿಯಾ ಮತ್ತು ಮನಾಲಿ ಬೋರಾ ಎದುರು ಗೆದ್ದು ಪ್ರಶಸ್ತಿ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.