‘ಬೀಟ್‌ ದಿ ಸ್ಟ್ರೀಟ್ಸ್‌’ ಅಖಾಡದಲ್ಲಿ ಬಜರಂಗ್ ನವದೆಹಲಿ (ಎಎಫ್‌ಪಿ): ಭಾರತದ ಬಜರಂಗ್ ಪೂನಿಯಾ ಅವರು ಅಮೆರಿಕದಲ್ಲಿ ಆಯೋಜನೆಯಾಗಿರುವ ‘ಬೀಟ್‌ ದಿ ಸ್ಟ್ರೀಟ್ಸ್‌–ಗ್ರಾಪಲ್‌ ಅಟ್‌ ದಿ ಗಾರ್ಡನ್‌’ ಕುಸ್ತಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಮೇ ಆರರಂದು ನ್ಯೂಯಾರ್ಕ್‌ನ ಪ್ರತಿಷ್ಠಿತ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ಬಜರಂಗ್‌ ಅವರು ಅಮೆರಿಕದ ಯಿಯಾನಿ ದಿಯಾಕೊಮಹ್ಲಿಸ್‌ ವಿರುದ್ಧ ಸೆಣಸಲಿದ್ದಾರೆ. ಮ್ಯಾಡಿಸನ್‌ ಗಾರ್ಡನ್‌ನಲ್ಲಿ ಪಂದ್ಯ ಆಡಲಿರುವ ಭಾರತದ ಮೊದಲ ಕುಸ್ತಿಪಟು ಎಂಬ ಹಿರಿಮೆಗೆ ಬಜರಂಗ್‌ ಪಾತ್ರರಾಗಿದ್ದಾರೆ. 25 ವರ್ಷದ ಬಜರಂಗ್‌, ಇತ್ತೀಚೆಗೆ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನ 65 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಯಿಯಾನಿ ಅವರು ಅಮೆರಿಕದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎರಡು ಸಲ ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿದ್ದಾರೆ. ‘ಬೀಟ್‌ ದಿ ಸ್ಟ್ರೀಟ್ಸ್‌ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿದ್ದು ಅದೃಷ್ಟ. ಅಲ್ಲಿ ಕಣಕ್ಕಿಳಿಯುವುದರಿಂದ ಹೊಸ ಅನುಭವ ದೊರೆಯಲಿದೆ. ಮ್ಯಾಡಿಸನ್‌ ಸ್ಕ್ವೇರ್‌ನಲ್ಲಿ ಆಡುತ್ತಿರುವ ಭಾರತದ ಮೊದಲ ಕುಸ್ತಿಪಟು ಎಂಬುದನ್ನು ಕೇಳಿ ಹೆಮ್ಮೆಯಾಗುತ್ತಿದೆ. ಭಾರತದವರು ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅವರ ನಿರೀಕ್ಷೆಯನ್ನು ಎಲ್ಲಿ ಹುಸಿಗೊಳಿಸಿ ಬಿಡುವೆನೋ ಎಂಬ ಭಯವೂ ಇದೆ’ ಎಂದು ಬಜರಂಗ್‌ ನುಡಿದಿದ್ದಾರೆ. ಬಜರಂಗ್‌ ಅವರು ಹಿಂದಿನ ಒಂಬತ್ತು ಅಂತರರಾಷ್ಟ್ರೀಯ ಟೂರ್ನಿಗಳ ಪೈಕಿ ಎಂಟರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಮೆರಿಕದ ಕೈಲ್‌ ಸ್ನಿಡರ್‌ ಮತ್ತು ಜೋರ್ಡನ್‌ ಬುರೊಸ್‌ ಅವರೂ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಕೈಲ್‌, 97 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಜೋರ್ಡನ್‌ ಅವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.