ಕ್ವಾರ್ಟರ್‌ಗೆ ಶ್ರೀಕಾಂತ್‌, ಸೌರಭ್‌ ಲಖನೌ (ಪಿಟಿಐ): ಅದ್ಭುತ ಲಯ ಮುಂದುವರಿಸಿದ ಭಾರತದ ಕಿದಂಬಿ ಶ್ರೀಕಾಂತ್‌ ಹಾಗೂ ಸೌರಭ್‌ ವರ್ಮಾ ಅವರು ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಆದರೆ ಯುವ ಆಟಗಾರ ಲಕ್ಷ್ಯ ಸೇನ್‌ ಗುರುವಾರ ಸೋತು ಟೂರ್ನಿಯಿಂದ ನಿರ್ಗಮಿಸಿದರು. 2016ರಲ್ಲಿ ಟೂರ್ನಿಯ ಚಾಂಪಿಯನ್‌ ಆಗಿರುವ ಶ್ರೀಕಾಂತ್‌, 18–21, 22–20, 21–16ರಿಂದ ತಮ್ಮದೇ ದೇಶದ ಪರುಪಳ್ಳಿ ಕಶ್ಯಪ್‌ ಎದುರು ರೋಚಕ ಹಣಾಹಣಿಯಲ್ಲಿ ಗೆದ್ದರು. ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವಶ್ರೀಕಾಂತ್ ಅವರಿಗೆ ಮುಂದಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಕೊರಿಯಾ ಆಟಗಾರ ಸನ್‌ ವಾನ್‌ ಹೊ ಎದುರಾಳಿ. ಎರಡನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಸೌರಭ್‌ ಅವರು ಭಾರತದವರೇ ಆದ ಆಲಾಪ್‌ ಮಿಶ್ರಾ ಅವರನ್ನು 21–11, 21–18ರಿಂದ ಪರಾಭವಗೊಳಿಸಿದರು. ಎಂಟರ ಘಟ್ಟದ ಹಣಾಹಣಿಯಲ್ಲಿ ಸೌರಭ್‌ ಅವರಿಗೆ ಥಾಯ್ಲೆಂಡ್‌ನ ಕುನ್ಲಾವುತ್‌ ವಿತಿದ್‌ಸರ್ನ್‌ ಅವರ ಎದುರು ಆಡುವರು. ಥಾಯ್ಲೆಂಡ್‌ನ ಆಟಗಾರ ಕ್ವಾರ್ಟರ್‌ಫೈನಲ್‌ ತಲುಪಲು ವಿಶ್ವ ಚಾಂಪಿಯನ್‌ಷಿಪ್‌ ಕಂಚು ವಿಜೇತ ಭಾರತದ ಬಿ.ಸಾಯಿ ಪ್ರಣೀತ್‌ ಅವರನ್ನು 21–11, 21–17ರಿಂದ ಸೋಲಿಸಿದ್ದರು. 18 ವರ್ಷದ ಲಕ್ಷ್ಯ ಸೇನ್‌ ಅವರು ಇಲ್ಲಿ ಉತ್ತಮ ಸಾಮರ್ಥ್ಯ ತೋರುವಲ್ಲಿ ವಿಫಲವಾದರು. ಅನುಭವಿ ಆಟಗಾರ ಕೊರಿಯಾದ ಸನ್‌ ವಾನ್‌ ಹೊ ಎದುರು 14–21, 17–21ರಿಂದ ಅವರು ಸೋತರು. ಭಾರೀ ಹೋರಾಟ ನೀಡಿದ ಭಾರತದ ಇನ್ನೊಬ್ಬ ಆಟಗಾರ ಅಜಯ್‌ ಜಯರಾಮ್‌ ಕೂಡ ಚೀನಾದ ಜೊವಾ ಜುನ್‌ ಪೆಂಗ್‌ ಎದುರು 18–21, 21–14, 28–30ರಿಂದ ಮಣಿದರು. ಸಿರಿಲ್‌ ವರ್ಮಾ ಅವರು ಕೊರಿಯಾದ ಹೊ ಕ್ವಾಂಗ್‌ ಹೀ ಎದುರು 9–21, 22–24ರಿಂದ ಸೋತರು. ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿ ರೆಡ್ಡಿ ಅವರು ಇಂಗ್ಲೆಂಡ್‌ನ ಕ್ಲೊ ಬಿರ್ಚ್‌–ಲಾರೆನ್‌ ಸ್ಮಿತ್‌ ಎದುರು 0–2 ಹಿನ್ನಡೆಯಲ್ಲಿದ್ದಾಗ ಪಂದ್ಯದಿಂದ ನಿವೃತ್ತಿ ಪಡೆದರು. ಮಹಿಳಾ ಡಬಲ್ಸ್ ಮತ್ತೊಂದು ಜೋಡಿ ಸಿಮ್ರಾನ್‌ ಸಿಂಘಿ–ರಿತಿಕಾ ಟಕ್ಕರ್‌ ಅವರು ಭಾರತದವರೇ ಆದ ರಿಯಾ ಮುಖರ್ಜಿ–ಅನುರಾ ಪ್ರಭುದೇಸಾಯಿ ಎದುರು 21–12, 21–15ರಿಂದ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಭಾರತದ ಇನ್ನೊಂದು ಜೋಡಿ ಕುಹೂ ಗರ್ಗ್‌– ಅನುಷ್ಕಾ ಪಾರಿಖ್‌ ಅವರು ಶೇಷಾದ್ರ ಸನ್ಯಾಲ್‌–ಲಾವಣ್ಯಾ ಶರ್ಮಾ ಅವರನ್ನು 21–13, 21–6ರಿಂದ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.