ಹಾಕಿ: ಭಾರತ ತಂಡಕ್ಕೆ ಸೋಲು ಪರ್ತ್: ಭಾರತ ಹಾಕಿ ತಂಡವು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸೋತಿತು. ಬುಧವಾರ ನಡೆದ ಹಣಾಹಣಿಯಲ್ಲಿ ಭಾರತ ತಂಡವು 0–4 ಗೋಲುಗಳಿಂದ ಆಸ್ಟ್ರೇಲಿಯಾ ಎದುರು ಸೋತಿತು. ಆಸ್ಟ್ರೇಲಿಯಾ ತಂಡದ ಬ್ಲೇಕ್ ಗೋವರ್ಸ್ (15ನೇ ನಿಮಿಷ, 60ನೇ ನಿ) ಮತ್ತು ಜೆರೆಮೈ ಹೇವರ್ಡ್‌ (20ನೇ ನಿ, 59ನಿ) ತಲಾ ಎರಡು ಗೋಲು ಹೊಡೆದರು. ಆಸ್ಟ್ರೇಲಿಯಾದ ರಕ್ಷಣಾಕೋಟೆ ಭದ್ರವಾಗಿತ್ತು. ಭಾರತದ ಫಾರ್ವರ್ಡ್‌ ಆಟಗಾರರಿಗೆ ಒಂದೇ ಒಂದು ಗೋಲು ಹೊಡೆಯಲು ಕೂಡ ಸಾಧ್ಯವಾಗಲಿಲ್ಲ. ಆದರೆ, ಭಾರತದ ಆಟಗಾರರು ಪಂದ್ಯದ ಆರಂಭದಲ್ಲಿ ಉತ್ತಮವಾಗಿ ಆಡಿದರು. ಐದನೇ ನಿಮಿಷದಲ್ಲಿ ಲಭಿಸಿದ್ದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರ ನಿಖರ ಹೊಡೆತವನ್ನು ಆತಿಥೇಯ ರಕ್ಷಣಾ ಪಡೆಯು ತಡೆಯಿತು. 12ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಮತ್ತು ನೀಲಕಂಠ ಶರ್ಮಾ ಅವರು ಉತ್ತಮ ಹೊಂದಾಣಿಕೆಯ ಆಟದ ಮೂಲಕ ಚೆಂಡನ್ನು ಗೋಲುಪೆಟ್ಟಿಗೆ ಸಮೀಪ ತಂದಿದ್ದರು. ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.