ಕಬಡ್ಡಿ : ಡೆಲ್ಲಿ ತಂಡಕ್ಕೆ ಜಯ ಪುಣೆ: ಆರಂಭದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬಂದರೂ ಬಳಿಕ ನಿಧಾನವಾಗಿ ಪಂದ್ಯದ ಹಿಡಿತ ಕಂಡುಕೊಂಡ ದಿಲರ್ ಡೆಲ್ಲಿ ತಂಡ, ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೋ ಇಂಟರ್‍ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಚೇ ರಾಜೆ ತಂಡವನ್ನು ಮಣಿಸಿತು. ಇಲ್ಲಿನ ಬಾಳೆವಾಡಿಯಲ್ಲಿರುವ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಮಿಂಚಿನ ಆಟವಾಡಿದ ಡೆಲ್ಲಿ ತಂಡ 56-35 ಅಂಕಗಳಿಂದ ಮುಂಬೈ ಚೇ ರಾಜೆ ತಂಡವನ್ನು ಬಗ್ಗುಬಡಿಯಿತು. ಈ ಮೂಲಕ ಲೀಗ್‍ನಲ್ಲಿ ಸತತ ಎರಡನೇ ಜಯ ದಾಖಲಿಸಿ ಅಂಕಪಟ್ಟಿಯ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದೆ. ರೇಡರ್ ಸುನಿಲ್ ಜೈಪಾಲ್ ಪಂದ್ಯ ಶ್ರೇಷ್ಠ ಗೌರವ ಪಡೆದರೆ, ನವೀನ್ ರೇಡರ್ ಪ್ರಶಸ್ತಿಗೆ ಭಾಜನರಾದರು. ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಚಾಲೆಂಜರ್ಸ್ ತಂಡವನ್ನು 52-30 ಅಂಕಣಗಳ ಭಾರಿ ಅಂತರದಿಂದ ಮಣಿಸಿದ್ದ ದಿಲರ್ ಡೆಲ್ಲಿ ತಂಡ, ಮುಂಬೈ ತಂಡವನ್ನೂ ಅದೇ ರೀತಿ ಬಗ್ಗುಬಡಿಯುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ ತನ್ನ ಮೊದಲ ಹಣಾಹಣಿಯಲ್ಲಿ ತೆಲುಗು ಬುಲ್ಸ್ ಎದುರು ಒಂದು ಅಂಕದಿಂದ (34-33) ರೋಚಕ ಜಯ ದಾಖಲಿಸಿದ್ದ ಮುಂಬೈ ತಂಡ ಟೂರ್ನಿಯಲ್ಲಿ ಮೊದಲ ಸೋಲಿನ ಕಹಿಯುಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.