ಹಾಕಿ: ಭಾರತದ ಕೈವಶವಾದ ದ್ವಿಪಕ್ಷೀಯ ಸರಣಿ ಜಿಂಚಿಯೊನ್‌, ಕೊರಿಯಾ: ಒಂದು ಗೋಲಿನ ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ಹಾಕಿ ತಂಡ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಬುಧವಾರ 2–1ರಿಂದ ಮಣಿಸಿತು. ಆ ಮೂಲಕ ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು. ನಾಯಕಿ ರಾಣಿ ರಾಂಪಾಲ್‌ (37ನೇ ನಿಮಿಷ) ಹಾಗೂ ನವಜೋತ್‌ ಕೌರ್‌ (50ನೇ ನಿಮಿಷ) ಭಾರತದ ಪರ ಮೋಡಿ ಮಾಡಿದರು. ದಕ್ಷಿಣ ಕೊರಿಯಾದ ಲೀ ಸೆವುಂಗ್‌ ಜು ಅವರು 19ನೇ ನಿಮಿಷದಲ್ಲಿ ತಮ್ಮ ತಂಡದ ಪರ ಗೋಲು ಗಳಿಸಿದರು. ಉಭಯ ತಂಡಗಳು ಆರಂಭದಲ್ಲೇ ಬಿರುಸಿನ ಆಟಕ್ಕೆ ಮನೆ ಮಾಡಿದವು. ಪ್ರಥಮ ಕ್ವಾರ್ಟರ್‌ನಲ್ಲಿ ಇತ್ತಂಡಗಳ ಗೋಲ್‌ ಕೀಪರ್‌ಗಳು ಪೆನಾಲ್ಟಿ ಕಾರ್ನರ್‌ ಹೊಡೆತಗಳನ್ನು ತಡೆದು ಸ್ಕೋರ್ ಬೋರ್ಡ್‌ ಖಾಲಿ ಇರುವಂತೆ ನೋಡಿಕೊಂಡರು. 19ನೇ ನಿಮಿಷದಲ್ಲಿ ಸೆವುಂಗ್‌ ಜು ಸೊಗಸಾದ ಫೀಲ್ಡ್‌ ಗೋಲು ದಾಖಲಿಸುವ ಮೂಲಕ ದಕ್ಷಿಣ ಕೊರಿಯಾ ತಂಡಕ್ಕೆ ಮುನ್ನಡೆ ದೊರಕಿಸಿದರು. ಈ ಹಂತದಲ್ಲಿ ಭಾರತದ ಆಟಗಾರ್ತಿಯರು ಆಟದ ವೇಗವನ್ನು ಇನ್ನಷ್ಟು ಹೆಚ್ಚಿಸಿದರು. ಮೂರನೇ ಕ್ವಾರ್ಟರ್‌ಗೆ ಏಳು ನಿಮಿಷಗಳು ಬಾಕಿ ಇರುವಂತೆಯೇ ನಾಯಕಿ ರಾಣಿ ಅವರು ಜಾಣತನ ತೋರಿದರು. ಸುಂದರ ಫೀಲ್ಡ್‌ ಗೋಲು ಹೊಡೆದು ತಂಡದಲ್ಲಿ ಸಂತಸದ ಅಲೆ ಚಿಮ್ಮಿಸಿದರು. ಆ ಬಳಿಕ ದಕ್ಷಿಣ ಕೊರಿಯಾದ ರಕ್ಷಣಾ ಆಟಗಾರರ ಮೇಲೆ ಭಾರತದ ವನಿತೆಯರು ಒತ್ತಡ ಹೆಚ್ಚಿಸಿದರು. 50ನೇ ನಿಮಿಷದಲ್ಲಿ ನವಜೋತ್‌ ಕೌರ್‌ ಗೋಲು ಬಾರಿಸಿ ಮುನ್ನಡೆಯನ್ನು ಹೆಚ್ಚಿಸಿದರು. ‘ಈ ಪಂದ್ಯದಲ್ಲಿ ಮೊದಲ ಪಂದ್ಯಕ್ಕಿಂತ ನಾವು ಉತ್ತಮವಾಗಿ ಆಡಿದೆವು. ಗುಣಾತ್ಮಕ ಹಾಗೂ ಸ್ಥಿರತೆಯ ಪ್ರದರ್ನಶ ಆಟಗಾರ್ತಿಯರಿಂದ ಹೊರಹೊಮ್ಮಿತು’ ಎಂದು ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಜೋಯರ್ಡ್‌ ಮರೀನ್‌ನುಡಿದರು. ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡವನ್ನು ರಾಣಿ ಪಡೆ ಮಣಿಸಿ ಮೆರೆದಿತ್ತು. ಮೂರನೇ ಹಾಗೂ ಕೊನೆಯ ಪಂದ್ಯವು ಶುಕ್ರವಾರ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.