ನಿಕಿಗೆ ಶ್ರದ್ಧಾಂಜಲಿ ಸಲ್ಲಿಸಿದ ಫೆರಾರಿ–ಮರ್ಸಿಡಿಸ್ ವಿಯೆನ್ನಾ: ಫೆರಾರಿ ಮತ್ತು ಮರ್ಸಿಡಿಸ್ ತಂಡಗಳು ತಮ್ಮ ವೈರತ್ವ ಮರೆತು ರೇಸ್ ದಿಗ್ಗಜ ನಿಕಿ ಆವುಡಾ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಸಿದ್ಧವಾಗಿವೆ. ಸೋಮವಾರ ಶ್ವಾಸಕೋಶದ ತೊಂದರೆಯಿಂದ ನಿಧನರಾದ ಫಾರ್ಮುಲಾ ಒನ್‌ಚಾಲಕ ಆಸ್ಟ್ರಿಯಾದ ನಿಕಿ ಆವುಡಾ (70) ಅವರಿಗೆ ಇದೇ ವಾರಾಂತ್ಯದಲ್ಲಿ ನಡೆಯಲಿರುವ ಮೊನಾಕೊ ಗ್ರ್ಯಾನ್‌ಪ್ರೀ ರೇಸ್‌ನಲ್ಲಿ ಎರಡೂ ತಂಡಗಳು ಗೌರವ ಸಲ್ಲಿಸಲಿವೆ. ಅದಕ್ಕಾಗಿ ತಮ್ಮ ಕಾರುಗಳ ಮೇಲೆ ನಿಕಿ ಚಿತ್ರ ಹಾಕಿಕೊಂಡಿವೆ. ನಿಕಿ ಮೂರು ಬಾರಿ ‘ಫಾರ್ಮುಲಾ ಒನ್‌ ಚಾಲಕರ’ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟವನ್ನು ಮುಡಿಗೇರಿಸಿ ಕೊಂಡಿದ್ದರು. 1975 ಹಾಗೂ 1977ರಲ್ಲಿ ಫೆರಾರಿ ಹಾಗೂ 1984ರಲ್ಲಿ ಮೆಕ್‌ಲಾರೆನ್‌ ತಂಡದ ಪರವಾಗಿ ಅವರು ಸಾಧನೆ ಮಾಡಿದ್ದರು. 1976ರಲ್ಲಿ ಭೀಕರ ಅಪಘಾತಕ್ಕೆ ತುತ್ತಾದರೂ ಛಲ ಕಳೆದು ಕೊಂಡಿರಲಿಲ್ಲ. ಟ್ರ್ಯಾಕ್‌ನಲ್ಲಿನ ವಿಜಯಗಳಿಂದ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಎಂಟು ತಿಂಗಳ ಹಿಂದೆ ಅವರು ಶ್ವಾಸಕೋಶದ ಕಸಿ ಮಾಡಿಸಿ‌ಕೊಂಡಿದ್ದರು. ಬ್ರಿಟಿಷ್‌ ಚಾಲಕ ಲೂಯಿಸ್ ಹ್ಯಾಮಿಲ್ಟನ್‌ರನ್ನು ಯಶಸ್ಸಿನ ಹಾದಿಗೆ ತರುವಲ್ಲಿ ನಿಕಿ ಅವರ ಪಾತ್ರ ಪ್ರಮುಖವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.