ಮೀರಾಬಾ, ಮಾಳವಿಕಾಗೆ ಕಿರೀಟ ತಿರುವನಂತಪುರ (ಪಿಟಿಐ): ಸೊಗಸಾದ ಪ್ರದರ್ಶನ ತೋರಿದ ಮಣಿಪುರದ ಮೈಸ್ನಾಮ್‌ ಮೀರಾಬಾ, ಅಖಿಲ ಭಾರತ ಜೂನಿಯರ್‌ ಬಾಲಕರ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ ಟೂರ್ನಿಯ 19 ವಯಸ್ಸಿನೊಳಗಿನವರ ವಿಭಾಗದಲ್ಲಿ ಸತತ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿದರು. ಮಹಾರಾಷ್ಟ್ರದ ಮಾಳವಿಕಾ ಬನ್ಸೋಡ ಅವರು ಮಹಿಳಾ ಸಿಂಗಲ್ಸ್‌ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ ಹಿಂದೆ ಬೆಂಗಳೂರು, ವಿಜಯವಾಡ ಹಾಗೂ ಚೆನ್ನೈನಲ್ಲಿ ನಡೆದ ಟೂರ್ನಿಗಳಲ್ಲಿ ಮೀರಾಬಾ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಇಲ್ಲಿ ಚಾಂಪಿಯನ್‌ ಆಗುವ ಮೂಲಕ ಅವರು ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಗೆ ಆಯ್ಕೆಯಾಗುವ ವಿಶ್ವಾಸವನ್ನು ಇಮ್ಮಡಿ ಮಾಡಿಕೊಂಡಿದ್ದಾರೆ. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮೀರಾಬಾ ಅವರು ಶಂಕರ್‌ ಮುತ್ತುಸ್ವಾಮಿ ಅವರನ್ನು 21–14, 21–10 ಗೇಮ್‌ಗಳಿಂದ ಮಣಿಸಿದರು. ಎರಡನೇ ಶ್ರೇಯಾಂಕದ ಮಾಳವಿಕಾ ಅವರು ಬಾಲಕಿಯರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಉತ್ತರಾಖಂಡದ ಉನ್ನತಿ ಬಿಸ್ಟ್‌ ಅವರನ್ನು 21–7, 21–9 ಗೇಮ್‌ಗಳಿಂದ ಸೋಲಿಸಿದರು. ಬಾಲಕರ ಡಬಲ್ಸ್‌ ಫೈನಲ್‌ನಲ್ಲಿ ಇಶಾನ್‌ ಭಟ್ನಾಗರ್‌ ಹಾಗೂ ವಿಷ್ಣುವರ್ಧನ ಗೌಡ ಜೋಡಿಯು ರವಿಕೃಷ್ಣನ್‌ ಪಿಎಸ್‌ ಹಾಗೂ ಮಾನವ್‌ ರಾಜ್‌ ಸ್ಮಿತ್‌ ಜೋಡಿಯನ್ನು 21–12, 21–14 ರಿಂದ ಸೋಲಿಸಿ ಪ್ರಶಸ್ತಿ ಬಾಚಿಕೊಂಡಿತು. ಬಾಲಕಿಯರ ಡಬಲ್ಸ್‌ನಲ್ಲಿ ತ್ರೀಶಾ ಜಾಲಿ ಹಾಗೂ ವರ್ಷಿಣಿ ವಿಎಸ್‌ ಪ್ರಶಸ್ತಿ ಗೆದ್ದುಕೊಂಡಿತು. ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿಯು ದಿಂಕು ಸಿಂಗ್‌ ಕೊಂಟೊಹೌಜಾಮ್‌ ಹಾಗೂ ರಿತಿಕಾ ಥಾಕರ್‌ ಅವರ ಪಾಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.