ಆಸ್ಟ್ರೇಲಿಯನ್‌ ಓಪನ್‌: ಸಿಂಧು, ಸಮೀರ್‌ಗೆ ಸೋಲಿನ ಕಹಿ ಸಿಡ್ನಿ (ಪಿಟಿಐ): ಭಾರತದ ಪಿ.ವಿ.ಸಿಂಧು ಹಾಗೂ ಸಮೀರ್‌ ವರ್ಮಾ ಅವರು ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ನಿರ್ಗಮಿಸಿದರು. ಸಿಂಧು ಜೊತೆಗೆ ಸ್ವದೇಶದ ಸಮೀರ್‌ ವರ್ಮಾ, ಬಿ.ಸಾಯಿ ಪ್ರಣೀತ್‌ ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ಶೆಟ್ಟಿ ಕೂಡಸೋತರು. ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಸಿಂಧು, ತನಗಿಂತ ಕೆಳಕ್ರಮಾಂಕದ ಥಾಯ್ಲೆಂಡ್‌ ಆಟಗಾರ್ತಿ ನಿಚಾವೊನ್ ಜಿಂದಾಪೊಲ್‌ ವಿರುದ್ಧ 19–21, 18–21 ಗೇಮ್‌ಗಳಿಂದ ಮಣಿದರು. ಕೇವಲ 49 ನಿಮಿಷಗಳಲ್ಲಿ ಪಂದ್ಯ ಅಂತ್ಯ ಕಂಡಿತು. ಜಿಂದಾಪೊಲ್‌ ವಿರುದ್ಧ ಆಡಿರುವ ಏಳು ಪಂದ್ಯಗಳಲ್ಲಿ ಸಿಂಧು ಅನುಭವಿಸಿದ ಎರಡನೇ ಪರಾಭವ ಇದು. ಮೊದಲ ಗೇಮ್‌ನಲ್ಲಿ 1–5 ಹಿನ್ನಡೆಯಲ್ಲಿದ್ದ ಸಿಂಧು ಆ ಬಳಿಕ ಪುಟಿದೆದ್ದು 11–9ರ ಅಲ್ಪ ಮುನ್ನಡೆ ಗಳಿಸಿದರು. ಆದರೂ ಅದ್ಭುತ ಆಟ ತೋರಿದ ಎದುರಾಳಿ ಜಿಂದಾಪೊಲ್‌, 16–12 ಮುನ್ನಡೆ ಗಳಿಸಿದರು. ಒಂದು ಹಂತದಲ್ಲಿ 19–19ರ ಸಮಬಲ ಕಂಡರೂ ಜಿಂದಾಪೊಲ್‌ ಗೇಮ್‌ ಬಿಟ್ಟುಕೊಡಲಿಲ್ಲ. ಎರಡನೇ ಗೇಮ್‌ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಸಮೀರ್‌ ವರ್ಮಾ ಅವರು ಚೀನಾ ತೈಪೇಯ ವಾಂಗ್‌ ಜು ವೆ ಅವರ ವಿರುದ್ಧ 16–21, 21–7, 13–21 ಅಂತರದಿಂದ ಸೋತರು. ಮತ್ತೊಂದು ಪಂದ್ಯದಲ್ಲಿ, ಆರಂಭದ ಗೇಮ್‌ನಲ್ಲಿ ತೀವ್ರ ಪೈಪೋಟಿ ನೀಡಿದ ಸಾಯಿ ಪ್ರಣೀತ್‌ , ಎರಡನೇ ಶ್ರೇಯಾಂಕದ ಅಂಥೋನಿ ಸಿನಿಸುಕಾ ಗಿಂಟಿಂಗ್‌ ಅವರಿಗೆ 23–25, 9–21 ಗೇಮ್‌ಗಳಿಂದ ಶರಣಾದರು. ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಜೋಡಿಯು ಚೀನಾದ ಲೀ ಜುನುಯಿ ಹಾಗೂ ಲಿವು ಯುಚೆನ್‌ ಜೋಡಿಗೆ 19–21, 18–21ರಿಂದ ಸೋತಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.