ಬುಲ್ಸ್‌ಗೆ ಸಮಾಧಾನಕರ ಗೆಲುವು ಮೈಸೂರು: ತೆಲುಗು ಬುಲ್ಸ್‌ ತಂಡ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನ (ಐಐಪಿಕೆಎಲ್‌) ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಪಾಂಡಿಚೇರಿ ಪ್ರಿಡೇಟರ್ಸ್‌ ವಿರುದ್ಧ 36–35 ಪಾಯಿಂಟ್‌ಗಳ ರೋಚಕ ಜಯ ಸಾಧಿಸಿತು. ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬುಲ್ಸ್‌ ತಂಡ ಆರಂಭದಿಂದ ಕೊನೆಯವರೆಗೂ ಮುನ್ನಡೆ ಕಾಪಾಡಿಕೊಂಡು ಗೆಲುವು ಒಲಿಸಿಕೊಂಡಿತು. ಈಗಾಗಲೇ ಸೆಮಿಫೈನಲ್‌ ಅವಕಾಶ ಕಳೆದುಕೊಂಡಿದ್ದ ಬುಲ್ಸ್‌ ತಂಡ ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿತ್ತು. ಆಡಿದ 10 ಪಂದ್ಯಗಳಲ್ಲಿ ಈ ತಂಡ ನಾಲ್ಕು ಪಾಯಿಂಟ್‌ ಕಲೆಹಾಕಿದೆ. ರೇಡಿಂಗ್‌ನಲ್ಲಿ ಆರು ಹಾಗೂ ಟ್ಯಾಕಲ್‌ನಲ್ಲಿ ಮೂರು ಪಾಯಿಂಟ್‌ ತಂದಿತ್ತ ಅನಿಲ್‌ ಪಾಟೀಲ್‌ ಅವರು ಬುಲ್ಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಆರಂಭದಲ್ಲೇ ಮುನ್ನಡೆ: ಬುಲ್ಸ್‌ ತಂಡ ಆರಂಭದಲ್ಲೇ ಮೇಲುಗೈ ಸಾಧಿಸಿತು. ಮೊದಲ ಮೂರು ನಿಮಿಷಗಳಲ್ಲಿ 4–0 ರಲ್ಲಿ ಮುನ್ನಡೆ ಗಳಿಸಿತು. ಮೊದಲ ಕ್ವಾರ್ಟರ್‌ ಕೊನೆಗೊಂಡಾಗ 10–6 ರ ಮುನ್ನಡೆ ತನ್ನದಾಗಿಸಿಕೊಂಡಿತು. ಎರಡನೇ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಬುಲ್ಸ್‌ ತಂಡದ ಅನಿಲ್‌ ಪಾಟೀಲ್ ಅವರು ಒಂದು ರೇಡ್‌ನಲ್ಲಿ ಮೂರು ಪಾಯಿಂಟ್‌ ತಂದಿತ್ತರು. ಇದರಿಂದ ಪ್ರಿಡೇಟರ್ಸ್‌ ಆಲೌಟ್‌ ಆಯಿತು. ಬುಲ್ಸ್‌ ಮುನ್ನಡೆ 16–6ಕ್ಕೆ ಹೆಚ್ಚಿತು. ಆ ಬಳಿಕವೂ ಉತ್ತಮ ಆಟ ಮುಂದುವರಿಸಿ ವಿರಾಮದ ವೇಳೆಗೆ 21–14 ರಲ್ಲಿ ಮುನ್ನಡೆ ಗಳಿಸಿತು. ಮೂರನೇ ಕ್ವಾರ್ಟರ್‌ನ ಮೂರನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿದ ಪ್ರಿಡೇಟರ್ಸ್‌ ಹಿನ್ನಡೆಯನ್ನು 20–22ಕ್ಕೆ ತಗ್ಗಿಸಿತು. ಆದರೂ ಪಟ್ಟುಬಿಡದೆ ಹೋರಾಟ ಮುಂದುವರಿಸಿದ ಬುಲ್ಸ್‌ ಮೂರನೇ ಕ್ವಾರ್ಟರ್‌ ಕ್ವಾರ್ಟರ್‌ ಕೊನೆಗೊಂಡಾಗ 30–27ರ ಮೇಲುಗೈ ಪಡೆಯಿತು. ಕೊನೆಯ ಕ್ವಾರ್ಟರ್‌ನಲ್ಲಿ ಪ್ರಿಡೇಟರ್ಸ್‌ ಒಡ್ಡಿದ ಸವಾಲು ಮೆಟ್ಟಿನಿಂತು ಒಂದು ಪಾಯಿಂಟ್‌ನ ರೋಚಕ ಜಯ ಸಾಧಿಸಿತು. ಸೆಮಿಗೆ ಹೆಚ್ಚಿದ ಪೈಪೋಟಿ: ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಅಂತಿಮ ಹಂತ ತಲುಪಿದ್ದು, ಸೆಮಿಫೈನಲ್‌ ಪ್ರವೇಶಿಸಲು ತಂಡಗಳ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಪುಣೆ ಪ್ರೈಡ್ (14 ಪಾಯಿಂಟ್) ಮತ್ತು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ದಿಲೇರ್‌ ದಿಲ್ಲಿ (13) ಈಗಾಗಲೇ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿವೆ. ಇನ್ನೆರಡು ಸ್ಥಾನಗಳಿಗೆ ಬೆಂಗಳೂರು ರಿನೋಸ್ (9 ಪಾಯಿಂಟ್), ಮುಂಬೈ ಚೆ ರಾಜೆ (8) ಚೆನ್ನೈ ಚಾಲೆಂಜರ್ಸ್ (7) ಮತ್ತು ಪಾಂಡಿಚೇರಿ ಪ್ರಿಡೇಟರ್ಸ್ (6) ನಡುವೆ ಪೈಪೋಟಿ ಏರ್ಪಟ್ಟಿದೆ. ಇಂದಿನ ಪಂದ್ಯಗಳು: ರಾತ್ರಿ 8 ಕ್ಕೆ; ಪಾಂಡಿಚೇರಿ ಪ್ರಿಡೇಟರ್ಸ್– ಚೆನ್ನೈ ಚಾಲೆಂಜರ್ಸ್, 9ಕ್ಕೆ: ಪುಣೆ ಪ್ರೈಡ್– ದಿಲೇರ್‌ ದಿಲ್ಲಿ ನೇರ ಪ್ರಸಾರ: ಡಿ ಸ್ಪೋರ್ಟ್ಸ್‌, ಡಿಡಿ ಸ್ಪೋರ್ಟ್ಸ್‌, ಎಂಟಿವಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.