ಮರಳಿದ ರಮಣ್‌ದೀಪ್‌, ವರುಣ್‌ಕುಮಾರ್‌ ನವದೆಹಲಿ: ಅನುಭವಿ ಆಟಗಾರ ರಮಣ್‌ದೀಪ್‌ ಸಿಂಗ್‌ ಭಾರತ ತಂಡಕ್ಕೆ ವಾಪಸಾಗಿದ್ದಾರೆ. ಮನ್‌ಪ್ರೀತ್‌ ಸಿಂಗ್‌ ನಾಯಕತ್ವದಲ್ಲಿ ಎಫ್‌ಐಎಚ್‌ ಪುರುಷರ ಹಾಕಿ ಸರಣಿ ಫೈನಲ್ಸ್‌ಗೆ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಜೂನ್‌ 6ರಿಂದ ಭುವನೇಶ್ವರದಲ್ಲಿ ಟೂರ್ನಿ ಆರಂಭವಾಗಲಿದೆ. ಮೊಣಕಾಲು ನೋವಿನ ಹಿನ್ನೆಲೆಯಲ್ಲಿ ಒಂಬತ್ತು ತಿಂಗಳು ರಮಣ್‌ದೀಪ್‌ ತಂಡದಿಂದ ಹೊರಗಿದ್ದರು. ಆಸ್ಟ್ರೇಲಿಯಾ ಪ್ರವಾಸದಿಂದ ವಿರಾಮ ತೆಗೆದುಕೊಂಡಿದ್ದ ವರುಣ್‌ಕುಮಾರ್‌ ಹಾಗೂ ಅಮಿತ್‌ ರೋಹಿದಾಸ್‌ ಕೂಡ ತಂಡಕ್ಕೆ ಮರಳಿದ್ದಾರೆ. ಮಿಡ್‌ಫೀಲ್ಡರ್‌ ಸುಮಿತ್‌ ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಬೀರೇಂದ್ರ ಲಾಕ್ರಾ ಉಪನಾಯಕನ ಜವಾಬ್ದಾರಿ ನಿಭಾಯಿಸುವರು. ರಷ್ಯಾ, ಪೋಲೆಂಡ್‌ ಹಾಗೂ ಉಜ್ಬೇಕಿಸ್ತಾನ ಜೊತೆಗೆ ಭಾರತ ತಂಡ ’ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜಪಾನ್, ಮೆಕ್ಸಿಕೊ, ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ‘ಬಿ’ ಗುಂಪಿನಲ್ಲಿವೆ. ಜೂ.6ರಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ರಷ್ಯಾವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಒಲಿಂಪಿಕ್‌ ಅರ್ಹತಾ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಇಲ್ಲಿ ಉತ್ತಮ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದೆ. ’ಭಾರತ ತಂಡದ ಮುಖ್ಯ ಕೋಚ್‌ ಆಗಿ ಇದು ನನಗೆ ಮೊದಲ ಎಫ್‌ಐಎಚ್‌ ಟೂರ್ನಿಯಾಗಿದೆ. ಮುನ್ನಡೆ ಪಡೆಯಲು ಹಾತೊರೆಯುತ್ತಿದ್ದೇವೆ. ಒಲಿಂಪಿಕ್‌ ಅರ್ಹತಾ ಟೂರ್ನಿಗೆ ಪ್ರವೇಶಿಸಲು ಇದು ವೇದಿಕೆಯಾಗಿದೆ’ ಎಂದು ಕೋಚ್‌ ಗ್ರಹಾಂ ರೇಡ್‌ ಹೇಳಿದರು. ಭಾರತ ತಂಡ ಗೋಲ್‌ಕೀಪರ್‌ಗಳು: ಪಿಆರ್‌ ಶ್ರೀಜೇಶ್‌, ಕೃಷ್ಣಾ ಬಿ ಪಾಠಕ್‌ ಡಿಫೆಂಡರ್ಸ್‌: ಹರ್ಮನ್‌ಪ್ರೀತ್‌ ಸಿಂಗ್‌, ಬೀರೇಂದ್ರ ಲಾಕ್ರಾ (ಉಪನಾಯಕ), ಸುರೇಂದರ್‌ ಕುಮಾರ್‌, ವರುಣ್‌ ಕುಮಾರ್‌, ಅಮಿತ್‌ ರೋಹಿದಾಸ್‌, ಗುರೀಂದರ್‌ ಸಿಂಗ್‌. ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್‌ ಸಿಂಗ್‌ (ನಾಯಕ), ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಸುಮಿತ್‌, ನೀಲಕಂಠ ಶರ್ಮಾ. ಫಾವರ್ಡ್ಸ್: ಮನ್‌ದೀಪ್‌ ಸಿಂಗ್‌, ಆಕಾಶ್‌ ದೀಪ್‌ ಸಿಂಗ್‌, ರಮಣ್‌ದೀಪ್‌ ಸಿಂಗ್‌, ಗುರುಸಾಹಿಬ್‌ಜೀತ್‌ ಸಿಂಗ್‌, ಸಿಮ್ರನ್‌ಜೀತ್‌ ಸಿಂಗ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.