ಸೈಕ್ಲಿಂಗ್‍ಗೂ ಸೈ, ಕಬಡ್ಡಿಗೂ ಜೈ ತೋರಣಗಲ್ಲು: ಸೈಕ್ಲಿಂಗ್‌ ಮತ್ತು ಕಬಡ್ಡಿಯಲ್ಲಿ ಅಪ್ರತಿಮ ಸಾಧನೆ ತೋರುವ ಮೂಲಕ ಮನೆ ಮಾತಾದವರುಕುಡಿತಿನಿಯ ಚಲುವಾದಿಕೇರಿಯ ಜಿ.ಯಲ್ಲಪ್ಪ. ಕಡು ಬಡತನದ ಕುಟುಂಬದಲ್ಲಿ ಬೆಳೆದ ಯಲ್ಲಪ್ಪನವರು ಕೃಷಿ, ಹಮಾಲಿ ಕೆಲಸ ಮಾಡಿ ಜೀವನ ಸಾಗಿಸುತ್ತ ಬಂದವರು. ಎಷ್ಟೇ ಅಡ್ಡಿ ಆತಂಕಗಳು ಬಂದರೂ ಸೈಕ್ಲಿಂಗ್‌ ಮತ್ತು ಕಬಡ್ಡಿ ಬಿಡಲಿಲ್ಲ. ಕ್ರೀಡೆ ಬಗೆಗೆ ಅವರಲ್ಲಿನ ಆಸ್ಥೆ, ಜನರ ಸಹಕಾರದಿಂದ ಅದರಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಈಗ ಅವರ ಮನೆಯ ತುಂಬೆಲ್ಲ ಪ್ರಶಸ್ತಿ ಫಲಕಗಳೇ ಆಕ್ರಮಿಸಿಕೊಂಡಿವೆ. ಜೀವನಾಧಾರಕ್ಕೆ ಜಿಂದಾಲ್‍ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಆದರೆ, ಆಟದಿಂದ ದೂರ ಉಳಿದಿಲ್ಲ. ಈಗ ವಯಸ್ಸು ಮೀರಿರುವುದರಿಂದ ಎಲ್ಲೇ ಕ್ರೀಡೆಗಳನ್ನು ಹಮ್ಮಿಕೊಂಡರೂ ಅದರಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡುತ್ತಾರೆ. ತೀರ್ಪುಗಾರರಾಗಿ ಕೆಲಸ ನಿರ್ವಹಿಸುತ್ತಾರೆ. ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2014ರಲ್ಲಿ ಹಂಪಿಯಿಂದ ಕುಡಿತಿನಿ ವರೆಗೆ ನಡೆದ ಸೈಕ್ಲಿಂಗ್‌ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿದ್ದರು. ಕಬಡ್ಡಿಯಲ್ಲಿ ಎಲ್ಲೆಡೆ ಮಿಂಚು ಹರಿಸಿದ್ದಾರೆ. ವಲಯ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತಂದಿದ್ದಾರೆ. ‘ಶಾಲೆ, ಕಾಲೇಜು ದಿನಗಳಲ್ಲಿ ಕ್ರೀಡೆ ಬಗ್ಗೆ ಬಹಳ ಆಸಕ್ತಿಯಿತ್ತು. ಆದರೆ, ಬಡತನ ಬಹಳ ಕಾಡುತ್ತಿತ್ತು. ಆರಂಭದಲ್ಲಿ ಜನರ ಸಹಕಾರ ಸಿಗಲಿಲ್ಲ. ನಂತರದ ದಿನಗಳಲ್ಲಿ ಒಳ್ಳೆಯ ಸಹಕಾರ ದೊರೆಯಿತು. ಆದರೆ, ವಯಸ್ಸು, ಸಂಸಾರದ ಜವಾಬ್ದಾರಿಯಿಂದ ರಾಷ್ಟ್ರೀಯ, ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಂಡು ಬೆಳೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇದೆ’ ಎಂದು ಯಲ್ಲಪ್ಪ ಹೇಳಿದರು. ‘ಗ್ರಾಮೀಣ ಭಾಗದಲ್ಲಿ ಅನೇಕ ಜನ ಪ್ರತಿಭಾವಂತರಿದ್ದಾರೆ. ಅವರಿಗೆ ಉಚಿತ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದೇನೆ. ಶಾಲಾ ಕ್ರೀಡಾಕೂಟಗಳಿಗೆ ಸಿದ್ಧತೆ ಮಾಡಿಕೊಳ್ಳುವ ಮಕ್ಕಳಿಗೆ ಅಗತ್ಯ ಮಾಹಿತಿ ಕೊಡುತ್ತಿರುವೆ. ನಮ್ಮ ಮಕ್ಕಳು ದೇಶ–ವಿದೇಶದಲ್ಲಿ ಹೆಸರು ಮಾಡಬೇಕು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.