ಎಎಫ್‌ಸಿ ಕಪ್‌: ಚೆನ್ನೈಯಿನ್‌ ಎಫ್‌ಸಿ ಮಿನರ್ವಾ ಪಂಜಾಬ್‌ ಮುಖಾಮುಖಿ ಗುವಾಹಟಿ: ಎಎಫ್‌ಸಿ ಕಪ್‌ ಫುಟ್‌ಬಾಲ್‌ ‘ಇ’ ಗುಂಪಿನ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ಹಾಗೂ ಮಿನರ್ವಾ ಪಂಜಾಬ್‌ ತಂಡಗಳು ಬುಧವಾರ ಮುಖಾಮುಖಿಯಾಗಲಿವೆ. ನಾಕೌಟ್‌ನಲ್ಲಿ ಸ್ಥಾನ ಪಡೆಯುವತ್ತ ಚೆನ್ನೈ ಚಿತ್ತವರಿಸಿದೆ. ಇಲ್ಲಿನ ಇಂದಿರಾಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಬಾಂಗ್ಲಾದೇಶ ಮೂಲದ ಅಬಹಾನಿ ಲಿಮಿಟೆಡ್‌ ಢಾಕಾ ಹಾಗೂ ಚೆನ್ನೈಯಿನ್‌ ಎಫ್‌ಸಿ ತಂಡಗಳು ನಾಲ್ಕು ಪಂದ್ಯಗಳಿಂದ ತಲಾ ಏಳು ಪಾಯಿಂಟ್‌ಗಳನ್ನು ಗಳಿಸಿವೆ. ಪಾಯಿಂಟ್‌ ಪಟ್ಟಿಯಲ್ಲಿ ಚೆನ್ನೈಯಿನ್‌ ಮೊದಲ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಚೆನ್ನೈಯಿನ್‌ ತಂಡ ಗೆದ್ದರೆ ನಾಕೌಟ್‌ ಹಂತಕ್ಕೆ ಸಮೀಪಿಸಲಿದೆ. ಇನ್ನೊಂದೆಡೆ ಎಲ್ಲ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಮಿನರ್ವಾ, ಪ್ರಥಮ ಬಾರಿ ಎಎಫ್‌ಸಿ ಕಪ್‌ ಗೆಲ್ಲುವತ್ತ ದೃಷ್ಟಿ ಹರಿಸಿದೆ.ಮೇ ತಿಂಗಳಲ್ಲಿ ಕೊನೆಯ ಬಾರಿ ಮಿನರ್ವಾ ಹಾಗೂ ಚೆನ್ನೈಯಿನ್‌ ತಂಡಗಳುಪಂದ್ಯವನ್ನು ಆಡಿದ್ದವು. ‘ಇ’ ಗುಂಪಿನ ಬುಧವಾರದ ಮತ್ತೊಂದು ಪಂದ್ಯದಲ್ಲಿ ಅಬಹಾನಿ ತಂಡವು ನೇಪಾಳದ ಮನಂಗ್‌ ಮಾರ್ಷಿಯಾಂಗಡಿ ಕ್ಲಬ್‌ ತಂಡವನ್ನು ಎದುರಿಸಲಿದೆ. ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆ ಸ್ಥಳ: ಗುವಾಹಟಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.