ನಾರ್ವೆ ಚೆಸ್‌: ಆನಂದ್‌ಗೆ ಸೋಲು ಸ್ಟಾವೆಂಜರ್‌, ನಾರ್ವೆ: ಭಾರತದ ವಿಶ್ವನಾಥನ್‌ ಆನಂದ್‌ ಅವರು ಅಲ್ಟಿಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದರು. ಚೀನಾದ ಯು ಯಾಂಗಿ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಟೈಬ್ರೇಕ್‌ನಲ್ಲಿ ಮಣಿದರು. ಸತತ ಮೂರು ಪಂದ್ಯಗಳ ಅವರ ಗೆಲುವಿನ ನಂತರ ಇದು ಆನಂದ್ ಅವರಿಗೆ ಮೊದಲ ಸೋಲು. 48 ನಡೆಗಳಲ್ಲಿ ಪಂದ್ಯವನ್ನು ಯಾಂಗಿ ತಮ್ಮದಾಗಿಸಿಕೊಂಡರು. ಪಾಯಿಂಟ್‌ ಪಟ್ಟಿಯಲ್ಲಿ ವಿಶ್ವ ಚಾಂಪಿಯನ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಒಟ್ಟು 9.5 ಪಾಯಿಂಟ್‌ ಗಳಿಸಿರುವ ಅವರು, ಚೀನಾದ ಯಾಂಗಿ ಅವರಿಗಿಂತ 1.5 ಪಾಯಿಂಟ್‌ ಮುಂದಿದ್ದಾರೆ. ಎಂಟು ಪಾಯಿಂಟ್‌ ಹೊಂದಿರುವ ಯಾಂಗಿ ಎರಡನೇ ಸ್ಥಾನ ಹಾಗೂ 7.5 ಪಾಯಿಂಟ್ ಕಲೆಹಾಕಿರುವ ಆರ್ಮೇನಿಯಾದ ಲೆವೊನ್‌ ಅರೋನಿಯನ್‌ ಮೂರನೇ ಸ್ಥಾನದಲ್ಲಿದ್ದಾರೆ. 5.5 ಪಾಯಿಂಟ್‌ ಹೊಂದಿರುವ ಭಾರತದ ಆನಂದ್‌ ಹಾಗೂ ಚೀನಾದ ಡಿಂಗ್‌ ಲಿರೆನ್‌ ಜಂಟಿ ಐದನೇ ಸ್ಥಾನ ಹಂಚಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.