ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌: ಸುಜ್ಞಾನ್‌ಗೆ ಮಣಿದ ಆದಿತ್ಯ ಬೆಂಗಳೂರು: ನಾಲ್ಕನೇ ಶ್ರೇಯಾಂಕದ ಆದಿತ್ಯ ದಿವಾಕರ್‌, ರಾಮಯ್ಯ ರಾಜನ್‌ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಮಂಗಳವಾರ ಸುಜ್ಞಾನ್‌ ಉಲ್ಹಾಸ್‌ ಕಿಣಿ ಎದುರು 21–14, 19–21, 19–21 ರಲ್ಲಿ ಸೋಲನುಭವಿಸಿದರು. ಸುಜ್ಞಾನ್ ಎಂಟರ ಘಟ್ಟ ತಲುಪಿದರು. ಮಲ್ಲೇಶ್ವರದ ಕೆನರಾ ಯೂನಿಯನ್‌ ಸಭಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಕಿಶಲ್‌ ಗಣಪತಿ ಕೂಡ ಸೋಲು ಕಂಡರು. ಸಾತ್ವಿಕ್‌ ಶಂಕರ್‌ 21–18, 13–21, 21–14ರಲ್ಲಿ ಕಿಶಲ್‌ ವಿರುದ್ಧ ಜಯಗಳಿಸಿದರು. ಅಗ್ರ ಶ್ರೇಯಾಂಕದ ಬಿ.ಎಸ್‌.ವೈಭವ್‌ ಶ್ರೀನಾಥ್‌, ಎರಡನೇ ಶ್ರೇಯಾಂಕದ ನರೇನ್‌ ಅಯ್ಯರ್‌ ಸೇರಿದಂತೆ ಇತರ ಶ್ರೇಯಾಂಕದ ಆಟಗಾರರು ಎಂಟರ ಘಟ್ಟಕ್ಕೆ ಮುನ್ನಡೆದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಾಲ್ವರು ಶ್ರೇಯಾಂಕ ಆಟಗಾರ್ತಿಯರು– ಎರಡನೇ ಶ್ರೇಯಾಂಕದ ಜನನಿ ಅನಂತಕುಮಾರ್‌,ಮೂರನೇ ಶ್ರೇಯಾಂಕದ ಗಾಯತ್ರಿ ರಾಣಿ, ನಾಲ್ಕನೇ ಶ್ರೇಯಾಂಕದ ಕಿಶಾ ಕೊಥಾರಿ ಮತ್ತು ಐದನೇ ಶ್ರೇಯಾಂಕದ ಆರುಂಧತಿ ಎನ್‌.ಎಂ. ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮಿಸಿದರು. ಅಗ್ರ ಶ್ರೇಯಾಂಕದ ತಾನ್ಯಾ ಹೇಮಂತ್‌ ಎಂಟರ ಘಟ್ಟ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.