ತಾನಿಯಾ–ಕೃತಿ ಫೈನಲ್‌ ಪೈಪೋಟಿ ಬೆಂಗಳೂರು: ಐ ಸ್ಪೋರ್ಟ್ಸ್‌ನ ತಾನಿಯಾ ಹೇಮಂತ್‌ ಮತ್ತು ಸ್ಕೈಫಿಂಚ್‌ ಅಕಾಡೆಮಿಯ ಕೃತಿ ಭಾರದ್ವಾಜ್‌ ಅವರು ರಾಮಯ್ಯ ರಾಜನ್‌ ಸ್ಮಾರಕ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಸಿ.ಯು.ಸಿ.ಟಿ. ಅಂಗಳದಲ್ಲಿ ಗುರುವಾರ ನಡೆದ 17 ವರ್ಷದೊಳಗಿನವರ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ತಾನಿಯಾ 19–21, 21–12, 21–13ರಲ್ಲಿ ಅನುಷ್ಕಾ ಗಣೇಶ್‌ ಅವರನ್ನು ಸೋಲಿಸಿದರು. ಇನ್ನೊಂದು ಹೋರಾಟದಲ್ಲಿ ಕೃತಿ 19–21, 21–19, 21–19ರಲ್ಲಿ ಡಿವೈಇಎಸ್‌ನ ನೇಯ್ಸಾ ಕಾರ್ಯಪ್ಪ ಅವರನ್ನು ಪರಾಭವಗೊಳಿಸಿದರು. 17 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಡಿವೈಇಎಸ್‌ನ ಬಿ.ಎಸ್‌.ವೈಭವ್‌ ಶ್ರೀನಾಥ್‌ ಮತ್ತು ಲೆವಲ್‌ ಅಪ್‌ ಅಕಾಡೆಮಿಯ ನರೇನ್‌ ಎಸ್‌.ಅಯ್ಯರ್‌ ಮುಖಾಮುಖಿಯಾಗಲಿದ್ದಾರೆ. ಮೊದಲ ಸೆಮಿಫೈನಲ್‌ನಲ್ಲಿ ವೈಭವ್‌ 21–13, 21–6ರಲ್ಲಿ ರಾಜನ್‌ ಅಕಾಡೆಮಿಯ ಸುಜ್ಞಾನ್‌ ಉಲ್ಲಾಸ್‌ ಕಿಣಿ ಅವರನ್ನು ಮಣಿಸಿದರು. ನರೇನ್‌ 22–20, 18–21, 21–19ರಲ್ಲಿ ಮೈಸೂರಿನ ರಾಮ್‌ ಅಕಾಡೆಮಿಯ ಜಿ.ಜಯಂತ್‌ ಎದುರು ಗೆದ್ದರು. ಫೈನಲ್‌ಗೆ ನೇಯ್ಸಾ: 15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ನಲ್ಲಿ ನೇಯ್ಸಾ ಕಾರ್ಯಪ್ಪ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಸೆಮಿಫೈನಲ್‌ನಲ್ಲಿ ನೇಯ್ಸಾ 21–19, 15–21, 21–12ರಲ್ಲಿ ಐ ಸ್ಪೋರ್ಟ್ಸ್‌ನ ಇಲಿಶಾ ಪಾಲ್‌ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಸಿರಸಿಯ ನಾರಾಯಣಪೇಟ್ಕರ್‌ ಮಂಜುನಾಥ ಅಕಾಡೆಮಿಯ ಪ್ರೇರಣಾ ಎನ್‌.ಸೇಠ್‌ 21–17, 21–16ರಲ್ಲಿ ಡಿವೈಇಎಸ್‌ನ ಜಯಂತಿಕಾ ರಾಥೋಡ್‌ ಎದುರು ವಿಜಯಿಯಾದರು. 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ಕೆಬಿಎ ಅಕಾಡೆಮಿಯ ಆರುಜ್‌ ಮಹೇಶ್ವರಿ ಮತ್ತು ಐ ಸ್ಪೋರ್ಟ್ಸ್‌ ಅಕಾಡೆಮಿಯ ಸಾತ್ವಿಕ್‌ ಶಂಕರ್‌ ಅವರು ಫೈನಲ್‌ ತಲುಪಿದರು. ನಾಲ್ಕರ ಘಟ್ಟದ ಮೊದಲ ಪೈಪೋಟಿಯಲ್ಲಿ ಆರುಜ್‌ 21–19, 21–17ರಲ್ಲಿ ಜಿ.ಎಸ್‌.ಸುಮುಖ ಅವರನ್ನು ಪರಾಭವಗೊಳಿಸಿದರು. ಸಾತ್ವಿಕ್‌ 21–13, 17–21, 21–15ರಲ್ಲಿ ಪ್ರಕಾಶ್‌ ಪಡುಕೋಣೆ ಅಕಾಡೆಮಿಯ ತುಷಾರ್‌ ಸುವೀರ್‌ಗೆ ಸೋಲುಣಿಸಿದರು. 13 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ಐ ಸ್ಪೋರ್ಟ್ಸ್‌ನ ಅವಿ ಬಾಸಕ್‌ ಫೈನಲ್‌ಗೆ ಲಗ್ಗೆ ಇಟ್ಟರು. ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಅವಿ 21–11, 21–13ರಲ್ಲಿ ಡಿವೈಇಎಸ್‌ನ ಡಿ.ಬಿ.ಮಯೂಕ್‌ ಗೌಡ ಅವರನ್ನು ಮಣಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಬಿ.ಪಿ.ಬಿ. ಅಕಾಡೆಮಿಯ ಪ್ರಣವ್‌ ವೆಂಪತಿ 21–16, 21–3ರಲ್ಲಿ ಉದ್ಭವ್‌ ಅಕಾಡೆಮಿಯ ಪಿ.ಕೆ.ಸಂಕೀರ್ತ್‌ ಎದುರು ಗೆದ್ದರು. ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಪಟೇಲ್ಸ್‌ ಇನ್‌ ಅಕಾಡೆಮಿಯ ರುಜುಲಾ ರಾಮು ಮತ್ತು ಐ ಸ್ಪೋರ್ಟ್ಸ್‌ನ ಎ.ಎಸ್‌.ಮೌನಿತಾ ಫೈನಲ್‌ಗೆ ಲಗ್ಗೆ ಇಟ್ಟರು. ಸೆಮಿಫೈನಲ್‌ ಪಂದ್ಯಗಳಲ್ಲಿ ರುಜುಲಾ 21–16, 21–19ರಲ್ಲಿ ಅನುಷ್ಕಾ ಬರಾಯ್‌ ಎದುರೂ, ಮೌನಿತಾ 21–6, 21–10ರಲ್ಲಿ ಜಿ.ಎಸ್‌.ಮೇಘಶ್ರೀ ವಿರುದ್ಧವೂ ವಿಜಯಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.