ಸಂಗ್ರಾಮ್‌, ವರ್ಷಾಗೆ ಕಿರೀಟ ನವದೆಹಲಿ (ಪಿಟಿಐ): ಹರಿಯಾಣದ ಸಂಗ್ರಾಮ್‌ ದಹಿಯಾ ಹಾಗೂ ಮಧ್ಯಪ್ರದೇಶದ ವರ್ಷಾ ವರ್ಮನ್‌ ಅವರು ರಾಷ್ಟ್ರೀಯ ಶಾಟ್‌ಗನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿಕ್ರಮವಾಗಿ ಪುರುಷ ಹಾಗೂ ಮಹಿಳಾ ಡಬಲ್‌ ಟ್ರ್ಯಾಪ್‌ ವಿಭಾಗದ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಸೋಮವಾರ ಸಂಗ್ರಾಮ್‌ ಅವರು 150ರ ಪೈಕಿ 142 ಪಾಯಿಂಟ್ಸ್‌ ಗಳಿಸಿ ಚಿನ್ನ ಗೆದ್ದರು. ಈ ಹಿಂದೆ ವಿಶ್ವ ಚಾಂಪಿಯನ್‌ ಆಗಿದ್ದ ಒಎನ್‌ಜಿಸಿ ತಂಡದ ಅಂಕುರ್‌ ಮಿತ್ತಲ್‌ (137 ಪಾಯಿಂಟ್ಸ್) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 135 ಪಾಯಿಂಟ್ಸ್‌ಗಳಿಗೆ ಗುರಿಯಿಟ್ಟ ಪಂಜಾಬ್‌ನ ಪೃಥ್ವಿ ಸಿಂಗ್‌ ಚಾಹಲ್‌ ಅವರಿಗೆ ಕಂಚು ಒಲಿಯಿತು. ಮಹಿಳಾ ವಿಭಾಗದಲ್ಲಿ ವರ್ಷಾ ವರ್ಮನ್‌ ಅವರು 120ರ ಪೈಕಿ 97 ಪಾಯಿಂಟ್ಸ್ ಗಳಿಸಿ ಚಿನ್ನ ಜಯಿಸಿದರು. ಅವರದೇ ರಾಜ್ಯದ ಮನೀಷಾ ಕೀರ್‌ (93 ಪಾಯಿಂಟ್ಸ್) ಬೆಳ್ಳಿ ಹಾಗೂ ಮಧ್ಯಪ್ರದೇಶದ ಮಾಹಿಮಾ ವಿಶ್ವಕರ್ಮ (92 ಪಾಯಿಂಟ್ಸ್) ಕಂಚು ಗೆದ್ದರು. ಸಂಗ್ರಾಮ್‌ ಹಾಗೂ ವರ್ಷಾ ಅವರು ತಂಡ ವಿಭಾಗಗಳಲ್ಲೂ ತಮ್ಮ ರಾಜ್ಯಗಳಿಗೆ ಚಿನ್ನ ಗೆದ್ದುಕೊಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.