ಹಿಮಾ ದಾಸ್‌ಗೆ 200 ಮೀ. ಚಿನ್ನ ನವದೆಹಲಿ: ಭಾರತದ ಅಗ್ರಮಾನ್ಯ ಓಟಗಾರ್ತಿ ಹಿಮಾ ದಾಸ್‌, ಪೋಲೆಂಡ್‌ನಲ್ಲಿ ನಡೆದ ಪೊಝ್ನಾನ್‌ ಅಥ್ಲೆಟಿಕ್‌ ಗ್ರ್ಯಾನ್‌ಪ್ರೀ ಕೂಟದ 200 ಮೀಟರ್ಸ್‌ ಓಟದಲ್ಲಿ 23.65 ಸೆ.ಗಳ ಸಾಧನೆಯೊಡನೆ ಚಿನ್ನದ ಪಕದ ಗೆದ್ದುಕೊಂಡರು. ಷಾಟ್‌ಪಟ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತಾಜಿಂದರ್‌ ಪಾಲ್‌ ಸಿಂಗ್ ತೂರ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಹಿಮಾ ಈ ವರ್ಷ ಪಾಲ್ಗೊಳ್ಳುತ್ತಿರುವ 200 ಮೀ. ಓಟದ ಮೊದಲ ಸ್ಪರ್ಧೆ ಇದಾಗಿದೆ. ಅವರ ಅತ್ಯುತ್ತಮ ಸಾಧನೆ 23.10 ಸೆ. ಕಳೆದ ವರ್ಷ ದಾಖಲಾಗಿತ್ತು. ಭಾರತದ ಇನ್ನೊಬ್ಬ ಓಟಗಾರ್ತಿ ವಿ.ಕೆ.ವಿಸ್ಮಯಾ, 23.75 ಸೆ.ಗಳ ವೈಯಕ್ತಿಕ ಉತ್ತಮ ಅವಧಿಯೊಡನೆ ಮೂರನೇ ಸ್ಥಾನ ಪಡೆದರು. ಏಷ್ಯನ್‌ ಚಾಂಪಿಯನ್‌ ತೂರ್‌, 19.62 ಮೀಟರ್‌ಗಳ ಸಾಧನೆಯೊಡನೆ ಮೂರನೇ ಸ್ಥಾನ ಪಡೆದರು. ಕಳೆದ ವರ್ಷ ಏಷ್ಯನ್‌ ಗೇಮ್ಸ್‌ ಚಿನ್ನ ಗೆದ್ದಾಗ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ (20.75 ಮೀ.) ದಾಖಲಿಸಿದ್ದರು. ಪುರುಷರ 200 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಮೊಹಮ್ಮದ್‌ ಅನಾಸ್‌ 20.75 ಸೆ. ಅವಧಿಯೊಡನೆ ಕಂಚಿನ ಪದಕ ಪಡೆದರು. ಕೆ.ಎಸ್‌.ಜೀವನ್‌ ಪುರುಷರ 400ಮೀ. ಓಟದಲ್ಲಿ (47.25 ಸೆ.) ಮೂರನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.