‘ಮ್ಯಾರಥಾನ್‌ ರಾಜ’ ಡಿ.ವೈ.ಬಿರಾದಾರ ಕೋವಿಡ್‌ನಿಂದ ನಿಧನ ಬೆಂಗಳೂರು: ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟು, ಮ್ಯಾರಥಾನ್ ಓಟಗಾರ ಧರ್ಮರಾಯ ಯಶವಂತರಾಯ ಬಿರಾದಾರ (81) ಅವರು ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಕೋವಿಡ್‌–19 ಸೋಂಕು ತಗುಲಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಪತ್ನಿ, ನಾಲ್ವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ತೆಗ್ಗಿಹಳ್ಳಿಯಲ್ಲಿ ಜನಿಸಿದ್ದ ಡಿ.ವೈ.ಬಿರಾದಾರ ಮೊದಲು ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿದ್ದರು. ಬೆಳಗಾವಿ ಖಾನಾಪುರದಲ್ಲಿ ಸೇವೆ ಸಲ್ಲಿಸಿದ ನಂತರ ಬೆಂಗಳೂರಿಗೆ ವರ್ಗವಾಯಿತು. ನಂತರ ರೈಲ್ವೆ ಇಲಾಖೆ ಸೇರಿದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ವಾಸವಾಗಿದ್ದರು. ಐದು ಸಾವಿರ ಮೀಟರ್ಸ್‌, 10 ಸಾವಿರ ಮೀಟರ್ಸ್ ಮತ್ತು ಮ್ಯಾರಥಾನ್‌ ಓಟದಲ್ಲಿ ಅವರು ಸಾಧನೆ ಮಾಡಿದ್ದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಮಧ್ಯಮ ದೂರ ಅಂತರದ ಓಟಗಾರನಾಗಿದ್ದ ಬಿರಾದಾರ 1963ರಲ್ಲಿ ದೂರ ಅಂತರದ ಓಟದತ್ತ ಗಮನಹರಿಸಿದರು. 1965ರಲ್ಲಿ ಮೈಸೂರಿನಲ್ಲಿ ನಡೆದ ಪೊಲೀಸ್ ಕ್ರೀಡಾಕೂಟದ ಮ್ಯಾರಥಾನ್‌ನಲ್ಲಿ ದಾಖಲೆಯೊಂದಿಗೆ (2 ತಾಸು 34 ನಿಮಿಷ) ಮೊದಲಿಗರಾಗಿದ್ದರು. ಅಖಿಲ ಭಾರತ ಪೊಲೀಸ್ ಕ್ರೀಡಾಕೂಟದಲ್ಲಿ 2 ತಾಸು 33 ನಿಮಿಷದಲ್ಲಿ ಗುರಿ ಮುಟ್ಟಿದ್ದರು. ಮ್ಯಾರಥಾನ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.