ಶೂಟಿಂಗ್‌: ಇಳವೆನ್ನಿಲ, ಸೌರಭ್‌ ಶುಭಾರಂಭ ಒಸಿಜೆಕ್, ಕ್ರೊವೇಷಿಯಾ: ಭಾರತದ ಇಳವೆನ್ನಿಲ ವಾಳರಿವನ್ ಮತ್ತು ಸೌರಭ್ ಚೌಧರಿ ಇಲ್ಲಿ ಸೋಮವಾರ ಆರಂಭಗೊಂಡ ಯುರೋಪಿಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚು ಹರಿಸಿದರು. ಭಾರತದ ಶೂಟರ್‌ಗಳು ಚಾಂಪಿಯನ್‌ಷಿಪ್‌ನಲ್ಲಿ ಅತಿಥಿ ಕ್ರೀಡಾಪಟುಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಮಹಿಳೆಯರ 10 ಮೀಟರ್ಸ್ ಏರ್‌ ರೈಫಲ್‌ನ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಇಳವೆನ್ನಿಲ 630.4 ಸ್ಕೋರ್ ಗಳಿಸಿ ಫೈನಲ್ ಪ್ರವೇಶಿಸಿದರು. ಇರಾನ್‌ನ ಅರ್ಮಿನಾ ಸಡೆಘ್ಯಾನ್ (629.8) ಎರಡನೇ ಸ್ಥಾನ ಗಳಿಸಿದರು. ಪುರುಷರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸೌರಭ್ ಚೌಧರಿ 589 ಸ್ಕೋರು ಗಳಿಸಿ ಕನಿಷ್ಠ ಅರ್ಹತಾ ಸ್ಕೋರ್ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದರು. ಅಭಿಷೇಕ್ ವರ್ಮಾ 579 ಸ್ಕೋರ್‌ಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಅಪೂರ್ವಿ ಚಂಡೇಲಾ (627.8) ಮತ್ತು ಅಂಜುಮ್ ಮೌದ್ಗಿಲ್ (624.7) ಕ್ರಮವಾಗಿ ನಾಲ್ಕು ಮತ್ತು ಏಳನೇ ಸ್ಥಾನ ಗಳಿಸಿದರು. ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಯಶಸ್ವಿನಿ ಸಿಂಗ್ ದೇಸ್ವಾಲ್ ಮತ್ತು ಮನು ಭಾಕರ್ ಕ್ರಮವಾಗಿ572 ಮತ್ತು 573 ಸ್ಕೋರು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.