ಒಲಿಂಪಿಕ್ಸ್‌ ಅರ್ಹತೆಯತ್ತ ಪುರುಷರ ರಿಲೆ ತಂಡ ಪಟಿಯಾಲ: ಭಾರತದ ಪುರುಷರ 4x400 ಮೀಟರ್ಸ್ ರಿಲೇ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವತ್ತ ಹೆಜ್ಜೆ ಇರಿಸಿದೆ. ಶುಕ್ರವಾರ ಇಲ್ಲಿ ಆರಂಭಗೊಂಡ ರಾಷ್ಟ್ರೀಯ ಅಥ್ಲೆಟಿಕ್ಸ್‌ನ ಹೀಟ್ಸ್‌ನಲ್ಲಿ ತಂಡ 3 ನಿಮಿಷ 01.89 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ತಂಡ ಭರವಸೆ ಮೂಡಿಸಿತು. ಮೊಹಮ್ಮದ್ ಅನಾಸ್ ಯಾಹಿಯಾ, ಅಮೋಜ್ ಜೇಕಬ್, ಆರೋಗ್ಯ ರಾಜೀವ್‌ ಮತ್ತು ನೋಹ್‌ ನಿರ್ಮಲ್ ಅವರ ಈ ಸಾಧನೆಯಿಂದಾಗಿ ತಂಡ 16ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಏರಲಿದೆ. ಅಗ್ರ 16 ಸ್ಥಾನಗಳಲ್ಲಿರುವ ತಂಡಗಳು ಟೋಕಿಯೊ ಒಲಿಂಪಿಕ್ಸ್‌ನ ರಿಲೇಯಲ್ಲಿ ಪಾಲ್ಗೊಳ್ಳಲಿವೆ. ಅರ್ಹತೆ ಗಳಿಸಲು ಜೂನ್ 29 ಕೊನೆಯ ದಿನವಾಗಿದೆ. ಮಹಿಳೆಯರ 4x100 ಮೀ ರಿಲೇಯಲ್ಲಿ ಅರ್ಚನಾ ಸುಶೀಂದ್ರನ್‌, ಹಿಮಾ ದಾಸ್, ಧನಲಕ್ಷ್ಮಿ ಮತ್ತು ದ್ಯುತಿ ಚಾಂದ್ ಅವರಿಗೆ ನಿರ್ದಿಷ್ಟ ಅವಧಿಯಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. 43.05 ಸೆಕೆಂಡುಗಳ ಸಾಧನೆ ಮಾಡಿದ್ದರೆ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುತ್ತಿತ್ತು. ಆದರೆ 0.45 ಸೆಕೆಂಡುಗಳಲ್ಲಿ ಹಿಂದೆ ಉಳಿಯಿತು. ಕೋವಿಡ್‌ನಿಂದ ಗುಣಮುಖರಾಗಿ ಎರಡು ತಿಂಗಳೊಳಗೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಪಾರುಲ್ ಚೌಧರಿ ಮಹಿಳೆಯರ ಐದು ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನ ಗಳಿಸಿದರು. ಪುರುಷರ 10 ಸಾವಿರ ಮೀಟರ್ಸ್ ಓಟದಲ್ಲಿ ಮಧ್ಯಪ್ರದೇಶದ ವಿಕ್ರಂ ಭರತ್‌ ಸಿಂಗ್ ಚಿನ್ನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.