ನಿರಾಸೆ ಅನುಭವಿಸಿದ ಮೊ ಫರಾ ಮ್ಯಾಂಚೆಸ್ಟರ್‌: ಖ್ಯಾತ ಅಥ್ಲೀಟ್‌ ಮೊ ಫರಾ ಅವರು ಬ್ರಿಟಿಷ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್ಸ್‌ನ 10,000 ಮೀಟರ್‌ ಓಟದಲ್ಲಿ ಒಲಿಂಪಿಕ್ಸ್‌ಗೆ ನಿಗದಿಪಡಿಸಿದ್ದ ಅರ್ಹತಾ ಅವಧಿಯೊಳಗೆ ಗುರಿತಲುಪುವಲ್ಲಿ ಸ್ವಲ್ಪದರಲ್ಲೇ ಎಡವಿದರು. ಇದರಿಂದ ನಾಲ್ಕು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಅವರು ಟೋಕಿಯೊ ಕ್ರೀಡೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡರು. ಫರಾ ಅವರು ಮ್ಯಾಂಚೆಸ್ಟರ್‌ನಲ್ಲಿ ಶುಕ್ರವಾರ ನಡೆದ ಈ ಕೂಟದಲ್ಲಿ 27 ನಿಮಿಷ, 28 ಸೆಕೆಂಡುಗಳ ಒಳಗೆ ಗುರಿಮುಟ್ಟಿದ್ದಲ್ಲಿ, ಟೋಕಿಯೊಗೆ ಟಿಕೆಟ್‌ ಗ್ಯಾರಂಟಿಯಾಗುತಿತ್ತು. ಆದರೆ ಅವರು ಓಟ ಪೂರೈಸಲು 27 ನಿಮಿಷ 47.4 ಸೆಕೆಂಡು ಬಳಸಿಕೊಂಡರು. ಈ ಮೂಲಕ ಅವರು 2012 (ಲಂಡನ್‌) ಮತ್ತು 2016 (ರಿಯೊ) ರ ಕ್ರೀಡೆಗಳಲ್ಲಿ ಗೆದ್ದುಕೊಂಡಿದ್ದ ಅಗ್ರಪಟ್ಟವನ್ನು ಉಳಿಸಿಕೊಳ್ಳಲಾಗದೇ ನಿರಾಸೆ ಅನುಭವಿಸಿದರು. 38 ವರ್ಷ ಪ್ರಾಯದ ಮೊ ಫರಾ ಅವರು 5,000 ಮೀ. ಓಟದಲ್ಲೂ ಹಿಂದಿನ ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಆಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬ್ರಿಟನ್‌ ಕಂಡ ಅತ್ಯಂತ ಯಶಸ್ವಿ ಅಥ್ಲೀಟ್‌ ಆಗಿದ್ದಾರೆ. ‘ನನ್ನೆಲ್ಲಾ ಪ್ರಯತ್ನ ಮಾಡಿದೆ. ಗಾಳಿಯೂ ಜೋರಾಗಿ ಬೀಸುತಿತ್ತು. ಉಸಿರು ಬಿಗಿಹಿಡಿದು ಓಡಿದ್ದೆ. ಆದರೂ ಆಗಲಿಲ್ಲ’ ಎಂದು ಓಟದ ನಂತರ ಪ್ರತಿಕ್ರಿಯಿಸಿದರು. ಒಂದು ದಶಕದಲ್ಲಿ ಅವರು 10,000 ಮೀ. ಓಟದಲ್ಲಿ ಸೋತಿದ್ದು ಇದೇ ಮೊದಲು. 2017ರಲ್ಲಿ ಮ್ಯಾರಥಾನ್‌ ಓಟದ ಕಡೆ ಗಮನಹರಿಸಿದ್ದ ಅವರು ಟ್ರ್ಯಾಕ್‌ಗೆ ಮರಳಿದ್ದು ಈ ತಿಂಗಳ ಆರಂಭದಲ್ಲಿ ನಡೆದ ಬರ್ಮಿಂಗ್‌ಹ್ಯಾಮ್‌ ಕೂಟದ ಮೂಲಕ. ಅಲ್ಲೂ ಅವರು ಯಶಸ್ಸು ಕಂಡಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.