ಖೇಲ್‌ರತ್ನ: ಶ್ರೀಜೇಶ್‌, ದೀಪಿಕಾ ಹೆಸರು ಶಿಫಾರಸು ನವದೆಹಲಿ: ಭಾರತ ತಂಡದ ಅನುಭವಿ ಗೋಲ್‌ಕೀಪರ್ ಪಿ.ಆರ್‌.ಶ್ರೀಜೇಶ್ ಹಾಗೂ ಮಹಿಳಾ ತಂಡದ ಮಾಜಿ ಆಟಗಾರ್ತಿ ದೀಪಿಕಾ ಕುಮಾರಿ ಅವರನ್ನು ಹಾಕಿ ಇಂಡಿಯಾ ಈ ವರ್ಷದ ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ರತ್ನ ಪುರಸ್ಕಾರಕ್ಕೆ ಶಿಫಾರಸು ಮಾಡಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ಪುರುಷರ ತಂಡದ ಉಪನಾಯಕ ಆಗಿರುವ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಹಿಳಾ ತಂಡದ ವಂದನಾ ಕಟಾರಿಯಾ ಮತ್ತು ನವಜೋತ್ ಕೌರ್ ಅವರನ್ನು ಅರ್ಜುನ ಪ್ರಶಸ್ತಿಗಳಿಗೆ ಹೆಸರಿಸಲಾಗಿದೆ. ಆರ್‌.ಪಿ.ಸಿಂಗ್ ಹಾಗೂ ಚಿಂಗ್‌ಸುಬಮ್‌ ಸಂಗಾಯ್‌ ಇಬೆಮಲ್‌ ಅವರನ್ನು ಧ್ಯಾನ್‌ಚಂದ್‌ ಪ್ರಶಸ್ತಿಗೆ, ಕೋಚ್‌ಗಳಾದ ಬಿ.ಜೆ.ಕಾರ್ಯಪ್ಪ ಹಾಗೂ ಸಿ.ಆರ್.ಕುಮಾರ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಖೇಲ್‌ರತ್ನ ಪ್ರಶಸ್ತಿಗೆ 2017ರ ಜನವರಿ 1ರಿಂದ 2020ರ ಡಿಸೆಂಬರ್ 31ರ ಅವಧಿಯನ್ನು ಪರಿಗಣಿಸಲಾಗುತ್ತದೆ ಎಂದು ಹಾಕಿ ಇಂಡಿಯಾ ಹೇಳಿದೆ. ಈ ಅವಧಿಯಲ್ಲಿ ಶ್ರೀಜೇಶ್ ಅವರು, 2018ರಲ್ಲಿ ಬ್ರೆಡಾದಲ್ಲಿ ನಡೆದ ಹಾಕಿ ಚಾಂಪಿಯನ್‌ಷಿಪ್‌ ಟ್ರೋಫಿಯಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ, 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಮತ್ತು ಭುವನೇಶ್ವರದಲ್ಲಿ ನಡೆದ ಎಫ್ಐಎಚ್‌ ಸರಣಿ ಫೈನಲ್ಸ್‌ನಲ್ಲಿ ಚಿನ್ನದ ಪದಕ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶ್ರೀಜೇಶ್ ಅವರಿಗೆ 2015ರಲ್ಲಿ ಅರ್ಜುನ ಪುರಸ್ಕಾರ ಮತ್ತು 2015ರಲ್ಲಿ ಪದ್ಮಶ್ರೀ ಗೌರವಗಳೂ ಸಂದಿದೆ. ದೀಪಿಕಾ ಅವರು ತಂಡದಲ್ಲಿದ್ದಾಗ ಭಾರತ ಮಹಿಳಾ ತಂಡವು 2018ರ ಏಷ್ಯನ್ ಗೇಮ್ಸ್‌ನಲ್ಲಿ ಮತ್ತು ಅದೇ ವರ್ಷದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದೆ. ಡ್ರ್ಯಾಗ್‌ಫ್ಲಿಕರ್‌ ಹರ್ಮನ್‌ಪ್ರೀತ್ ಸಿಂಗ್ ಅವರು ಭಾರತ ತಂಡದ ಪರ 100ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ವಂದನಾ ಕಟಾರಿಯಾ 200ಕ್ಕೂ ಮೀರಿ ಮತ್ತು ನವಜೋತ್ 150ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.