ಶೂಟಿಂಗ್‌: ಪ್ರಶಸ್ತಿ ಸುತ್ತಿಗೆ ಮನು–ಸೌರಭ್ ಒಸಿಜೆಕ್‌, ಕ್ರೊವೇಷ್ಯಾ: ಅತ್ಯುತ್ತಮ ಸಾಮರ್ಥ್ಯ ತೋರಿದ ಯುವ ಶೂಟಿಂಗ್ ಪಟುಗಳಾದಭಾರತದ ಸೌರಭ್ ಚೌಧರಿ ಹಾಗೂ ಮನು ಭಾಕರ್ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನ 10 ಮೀಟರ್ ಏರ್ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ಅವರು ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ಟೂರ್ನಿಯ ಮೂರನೇ ದಿನವಾದ ಶನಿವಾರ, ಸ್ಪರ್ಧೆಯ ಕೊನೆಯ ಅರ್ಹತಾ ಸುತ್ತಿನಲ್ಲಿ ಮನು– ಸೌರಭ್ ಜೋಡಿ 387 ಸ್ಕೋರ್ ದಾಖಲಿಸಿ ಎರಡನೇ ಸ್ಥಾನ ಗಳಿಸಿ ಚಿನ್ನದ ಪದಕದ ಸುತ್ತಿಗೆ ಲಗ್ಗೆಯಿಟ್ಟಿತು. ಫೈನಲ್‌ನಲ್ಲಿ ಅವರು ರಷ್ಯಾದ ವಿಟಾಲಿನಾ ಬ್ಯಾಟ್‌ಸರಾಶ್ಕಿನಾ ಮತ್ತು ಆರ್ಟೆಮ್‌ ಚೆರ್ನೊಸೊವ್ ಎದುರು ಸೆಣಸಲಿದ್ದಾರೆ. ಇದೇ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅಭಿಷೇಕ್ ಹಾಗೂ ಯಶಸ್ವಿನಿ ಒಟ್ಟು 386 ಸ್ಕೋರ್ ಕಲೆಹಾಕಿದರು. ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಗಳಿಸಿದ ಅವರು ಕಂಚಿನ ಪದಕದ ಸುತ್ತಿನಲ್ಲಿ ಇರಾನ್‌ನ ಗೋಲ್‌ನೌಶ್‌ ಸೆಬ್ಗಾತೊಲ್ಲಾಯ್‌ ಮತ್ತು ಜಾವೇದ್ ಫಾರೂಕಿ ಜೋಡಿಗೆ ಮುಖಾಮುಖಿಯಾಗಲಿದ್ದಾರೆ. 10 ಮೀ.ಏರ್‌ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರೈಫಲ್ ಶೂಟರ್‌ಗಳಿಗೆ ಶನಿವಾರ ನಿರಾಸೆ ಕಾದಿತ್ತು. ಎರಡೂ ತಂಡಗಳು ಫೈನಲ್ ತಲುಪಲು ವಿಫಲವಾದವು. ಇಳವೆನ್ನಿಲಾ ವಾಳರಿವನ್‌–ದಿವ್ಯಾಂಶ ಸಿಂಗ್ ಪನ್ವರ್‌ ಎರಡನೇ ಅರ್ಹತಾ ಸುತ್ತು ಮಾತ್ರ ತಲುಪುವಲ್ಲಿ ಯಶಸ್ವಿಯಾಗಿ ಆರನೇ ಸ್ಥಾನ ಗಳಿಸಿದರು. ಅಂಜುಮ್ ಮೌದ್ಗಿಲ್‌–ದೀಪಕ್ ಕುಮಾರ್ ಅವರಿದ್ದ ತಂಡವು 15ನೇ ಸ್ಥಾನ ಗಳಿಸಿ ನಿರಾಸೆ ಮೂಡಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.