ವಿಶ್ವ ಕೆಡೆಟ್‌ ಕುಸ್ತಿ: ಅಮನ್‌, ಸಾಗರ್‌ಗೆ ಚಿನ್ನ ಬುಡಾಪೆಸ್ಟ್ : ಭಾರತದ ಯುವ ಕುಸ್ತಿಪಟುಗಳಾದ ಅಮನ್ ಗುಲಿಯಾ ಮತ್ತು ಸಾಗರ್ ಜಗ್ಲನ್‌ ಅವರು ವಿಶ್ವ ಕೆಡೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮಂಗಳವಾರ ರಾತ್ರಿ ನಡೆದ 48 ಕೆಜಿ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಅಮನ್‌ 5–2ರಿಂದ ಅಮೆರಿಕದ ಲ್ಯೂಕ್‌ ಜೋಸೆಫ್‌ ಲಿಲ್ಲೆಡಹಲ್‌ ಅವರನ್ನು ಚಿತ್ ಮಾಡಿದರು. 80 ಕೆಜಿ ವಿಭಾಗದ ಪ್ರಶಸ್ತಿ ಸುತ್ತಿನ ಬೌಟ್‌ನಲ್ಲಿ ಸಾಗರ್ 4–0ಯಿಂದ ಅಮೆರಿಕದ ಎದುರಾಳಿ ಜೇಮ್ಸ್ ಮೋಕ್ಲರ್‌ ರೌಲಿ ಎದುರು ಜಯ ಸಾಧಿಸಿದರು. 110 ಕೆಜಿ ವಿಭಾಗದ ಬೌಟ್‌ನಲ್ಲಿ ಕಜಕಸ್ತಾನದ ಅಲಿಖಾನ್‌ ಕುಸ್ಸೈನೊವ್ ಅವರನ್ನು ಮಣಿಸಿದ ಭಾರತದ ಸಾಹಿಲ್‌ ಕಂಚಿನ ಪದಕಕ್ಕೆ ಮುತ್ತಿಟ್ಟರು. ಕಂಚಿನ ಪದಕದ ಇನ್ನೊಂದು ಬೌಟ್‌ನಲ್ಲಿ ವೈಭವ್ ಪಾಟೀಲ್‌ (55 ಕೆಜಿ) ಅವರು 5–7ರಿಂದ ಅಜರ್‌ಬೈಜಾನ್‌ನ ಜಾವಿದ್‌ ಜಾವದೊಯ್ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.