ಒಲಿಂಪಿಕ್ಸ್‌: ‘ಭಾರತ ಗರಿಷ್ಠ ಪದಕ ಗೆಲ್ಲುವ ನಿರೀಕ್ಷೆ’ ಬೆಂಗಳೂರು: ‘ಭಾರತ ಈ ವರೆಗೆ ಗಳಿಸಿದ್ದಕ್ಕಿಂತ ಗರಿಷ್ಠ ಪದಕಗಳನ್ನು ಕೋವಿಡ್ ಕಾಲದಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೆಲ್ಲುವ ನಿರೀಕ್ಷೆ ಇದೆ’ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟರು. ಧ್ಯಾನ್ ಆ್ಯಪ್ ಮತ್ತು ಹರ್ಟ್‌ಫುಲ್‌ನೆಸ್ ಸಂಸ್ಥೆಗಳ ಒಗ್ಗೂಡುವಿಕೆಯನ್ನು ಘೋಷಿಸಲು ವರ್ಚುವಲ್ ಆಗಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡದವರ ಒತ್ತಡ ನಿರ್ವಹಣೆಗೆ ‘ಧ್ಯಾನ್‌’ ಆ್ಯಪ್‌ ಸಹಕಾರ ನಿಡುತ್ತಿದೆ. ಇದರ ಸ್ಥಾಪಕರೂ ಆಗಿರುವ ಗೋಪಿಚಂದ್ ‘ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳಿಗೆ ಈ ಬಾರಿ ಸರ್ಕಾರ ಉತ್ತಮ ಬೆಂಬಲ ನೀಡಿದೆ. ಹೀಗಾಗಿ ಅವರ ಹುಮ್ಮಸ್ಸು ಹೆಚ್ಚಿದೆ’ ಎಂದರು. ‘ಶೂಟಿಂಗ್, ಕುಸ್ತಿ, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳಲ್ಲಿ ಪದಕ ಗೆಲ್ಲುವ ಸಾಧ್ಯತೆಗಳು ಹೆಚ್ಚು ಇವೆ. ಇಲ್ಲಿಯ ವರೆಗೆ ಒಂದೇ ಆವೃತ್ತಿಯಲ್ಲಿ ಆರು ಪದಕ ಗೆದ್ದಿರುವುದು ಭಾರತದ ಗರಿಷ್ಠ ಸಾಧನೆ. ಈ ಬಾರಿ ಇದರ ದುಪ್ಪಟ್ಟು ಸಂಖ್ಯೆಗಿಂತ ಹೆಚ್ಚು ಪದಕಗಳು ಸಿಗಲಿವೆ. ಪಿ.ವಿ. ಸಿಂಧು ಅವರ ಹಾದಿ ಸುಗಮವಾಗಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ, ಸಿಂಗಲ್ಸ್‌ನಲ್ಲಿ ಬಿ. ಸಾಯ್ ಪ್ರಣೀತ್ ಅವರು ಕಠಿಣ ಸವಾಲುಗಳನ್ನು ಎದುರಿಸಬೇಕಾಗಿದೆ. ಆದರೂ ಒಳ್ಳೆಯ ಫಲಿತಾಂಶ ಹೊರಹೊಮ್ಮಲಿದೆ’ ಎಂದು ಅವರು ಹೇಳಿದರು. ‘ಸ್ಪರ್ಧಾ ಕಣದಲ್ಲಿ ಇದ್ದಾಗಲೇ ಧ್ಯಾನದ ಮಹತ್ವ ತಿಳಿದುಕೊಂಡಿದ್ದೆ. ರಷ್ಯಾದ ಮನೋರೋಗ ತಜ್ಞರೊಬ್ಬರು ಒಮ್ಮೆ ಭಾರತ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳ ಜೊತೆ ಯೋಗನಿದ್ರೆ ಬಗ್ಗೆ ಚರ್ಚಿಸುತ್ತಿದ್ದರು. ಮನಸ್ಸನ್ನು ಸಮಾಧಾನಪಡಿಸುವ ಕಲೆಯ ಬಗ್ಗೆ ಅವರು ಹೇಳುತ್ತಿದ್ದರು. ಅಲ್ಲಿಂದ ನಾನು ಕೂಡ ಹೆಚ್ಚು ಆಸಕ್ತಿಯಿಂದ ಅಭ್ಯಾಸ ಮಾಡಿದೆ. ಅದೇ ಹಿನ್ನೆಲೆಯಲ್ಲಿ ಆ್ಯಪ್ ಸಿದ್ಧಪಡಿಸಿದ್ದೆ. ಈಗ ಒಂದೂವರೆ ವರ್ಷದಿಂದ ಹರ್ಟ್‌ಫುಲ್‌ನೆಸ್‌ ಸಂಸ್ಥೆಯ ಜೊತೆ ನೆರವು ಕೂಡ ಸಿಗುತ್ತಿದೆ’ ಎಂದು ಗೋಪಿಚಂದ್ ವಿವರಿಸಿದರು. ‘ಮಾನಸಿಕ ಒತ್ತಡ ನಿಯಂತ್ರಣಕ್ಕೆ ತರಬೇತಿ ನೀಡುವುದು ಕಷ್ಟದ ಕಾರ್ಯ. ಕೆಲವರು ಕಣ್ಣು ಮುಚ್ಚಿ ಕುಳಿತುಕೊಂಡು ಧ್ಯಾನ ಮಾಡುವಂತೆ ಕಂಡುಬಂದರೂ ಅವರ ಮನಸ್ಸಿನೊಳಗೆ ಏನು ನಡೆಯುತ್ತಿದೆ ಎನ್ನಲು ಸಾಧ್ಯವಾಗುವುದಿಲ್ಲ. ಧ್ಯಾನ್ ಆ್ಯಪ್ ಧ್ಯಾನವನ್ನು ಸಮರ್ಪಕವಾಗಿ ನಿಯಂತ್ರಿಸುತ್ತದೆ. ಕೋವಿಡ್‌ ಕಾಲದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳು ಹೆಚ್ಚು ಒತ್ತಡ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಯಾರನ್ನೂ ಭೇಟಿ ಮಾಡಲಾಗದೆ, ಸಂಭ್ರಮಿಸಲೂ ಸಾಧ್ಯವಿಲ್ಲದೆ ಕೊಠಡಿಯೊಳಗೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ‘ಧ್ಯಾನ’ ಉಪಯುಕ್ತ’ ಎಂದು ಅವರು ಅಭಿಪ್ರಾಯಪಟ್ಟರು. ಹರ್ಟ್‌ಫುಲ್‌ನೆಸ್ ಸಂಸ್ಥೆಯ ನಿರ್ದೇಶಕ ಹಾಗೂ ತರಬೇತುದಾರ ಸಂಜಯ್ ಸೆಹಗಲ್‌ ‘‍ಒತ್ತಡವನ್ನು ಸವಾಲಾಗಿ ಪರಿವರ್ತಿಸಲು ಸಾಧ್ಯವಾದರೆ ಸಮಸ್ಯೆ ಎದುರಾಗುವುದಿಲ್ಲ ಎಂದರು. ಸಂಸ್ಥೆಯೆ ಹೈದರಾಬಾದ್‌ನಲ್ಲಿರುವ ಕೇಂದ್ರ ಕಚೇರಿಯ ಆವರಣದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸುವ ಉದ್ದೇಶ ಇದೆ’ ಎಂದು ಅವರು ತಿಳಿಸಿದರು. ಅವಾಂತರಿ ಟೆಕ್ನಾಲಜೀಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೈರವ್ ಶಂಕರ್, ಸ್ಕ್ವಾಷ್ ಪಟು ತನ್ವಿ ಖನ್ನಾ, ಹರ್ಟ್‌ಫುಲ್‌ನೆಸ್‌ನಲ್ಲಿ ಅಭ್ಯಾಸ ಮಾಡುತ್ತಿರುವನಟಿ ತಾನ್ಯ ಮಾಣಿಕ್ತಲ ಉಪಯುಕ್ತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.