: ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಜಾದೂ ಮಾಡಿದ ಜಪಾನ್‌ ಸಾಯ್‌ತಮಾ: ಜಪಾನ್‌ ಮಹಿಳಾ ತಂಡದವರು ಒಲಿಂಪಿಕ್ಸ್‌ನ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಜಪಾನ್‌ 87–71 ಪಾಯಿಂಟ್ಸ್‌ನಿಂದ ಫ್ರಾನ್ಸ್‌ ತಂಡವನ್ನು ಪರಾಭವಗೊಳಿಸಿತು. ಮೊದಲ ಕ್ವಾರ್ಟರ್‌ನಲ್ಲಿ 14–22ರಿಂದ ಹಿನ್ನಡೆ ಕಂಡಿದ್ದ ಜಪಾನ್‌ ಆಟಗಾರ್ತಿಯರು ಎರಡು ಮತ್ತು ಮೂರನೇ ಕ್ವಾರ್ಟರ್‌ಗಳಲ್ಲಿ ಪ್ರಾಬಲ್ಯ ಮೆರೆದರು. ಅಂತಿಮ ಕ್ವಾರ್ಟರ್‌ನಲ್ಲಿ ಫ್ರಾನ್ಸ್‌ ತಂಡ 21 ಪಾಯಿಂಟ್ಸ್‌ ಕಲೆಹಾಕಿದರೂ ಗೆಲುವು ದಕ್ಕಲಿಲ್ಲ. ಭಾನುವಾರ ನಡೆಯುವ ಫೈನಲ್‌ ಪೈಪೋಟಿಯಲ್ಲಿ ಜಪಾನ್‌ ತಂಡಕ್ಕ ಬಲಿಷ್ಠ ಅಮೆರಿಕ ಸವಾಲು ಎದುರಾಗಲಿದೆ. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಅಮೆರಿಕ 79–59 ಪಾಯಿಂಟ್ಸ್‌ನಿಂದ ಸರ್ಬಿಯಾ ತಂಡವನ್ನು ಸೋಲಿಸಿತು. ಇದರೊಂದಿಗೆ ಸತತ ಏಳನೇ ಬಾರಿ ಒಲಿಂಪಿಕ್ಸ್‌ನಲ್ಲಿ ಫೈನಲ್‌ ತಲುಪಿದ ಸಾಧನೆ ಮಾಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.