ಕುಸ್ತಿ: ಅನ್ಷುಗೆ ಬೆಳ್ಳಿ, ದಿವ್ಯಾ ಕಾಕ್ರನ್‌ಗೆ ತಪ್ಪಿದ ಕಂಚಿನ ಪದಕ ರೋಮ್‌ : ಭಾರತದಯುವ ಮಹಿಳಾ ಕುಸ್ತಿಪಟು ಅನ್ಷು ಮಲಿಕ್‌ ರೋಮ್‌ ರ‍್ಯಾಂಕಿಂಗ್‌ ಸಿರೀಸ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದರು. ಶುಕ್ರವಾರ ನಡೆದ 57 ಕೆಜಿ ಫೈನಲ್‌ ಬೌಟ್‌ನಲ್ಲಿ ಅವರು ನೈಜಿರೀಯಾದ ಒದುನಯೊ ಅದೆಕುರೊಯೆ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಸೋಲು ಕಂಡರು. ಕಂಚಿನ ಪದಕದ ಸುತ್ತಿಗಾಗಿ ನಡೆದ 68 ಕೆಜಿ ವಿಭಾಗದ ಮತ್ತೊಂದು ಬೌಟ್‌ನಲ್ಲಿ ದಿವ್ಯಾ ಕಾಕ್ರನ್‌ ಅವರು ಕೆನಡಾದ ಡೇನಿಯಲ್‌ ಸುಜಾನ್‌ ಲ್ಯಾಪ್ಪೇಜ್‌ ಎದುರು ಸೋತರು. ಅನ್ಷು ಫೈನಲ್‌ ತಲುಪುವ ಹಾದಿಯಲ್ಲಿ ಅಮೆರಿಕದ ಜೆನ್ನಾ ರೋಸ್‌ ಬರ್ಕರ್ಟ್‌, ನಾರ್ವೆಯ ಗ್ರೇಸ್‌ ಬುಲ್ಲೆನ್‌ ಹಾಗೂ 2019ರ ವಿಶ್ವ ಚಾಂಪಿಯನ್‌ ಕೆನಡಾದ ಲಿಂಡಾ ಮೊರೈಸ್‌ ಅವರನ್ನು ಪರಾಭವಗೊಳಿಸಿದ್ದರು. ಟ್ರಯಲ್ಸ್‌ನಲ್ಲಿ ಅನ್ಷು ವಿಶ್ವ ಚಾಂಪಿಯನ್‌ಷಿಪ್‌ ಕಂಚು ವಿಜೇತೆಪೂಜಾ ಧಂಡಾ ಅವರನ್ನು ಮಣಿಸಿದ್ದರು. 2019ರ ವಿಶ್ವ ಚಾಂಪಿಯನ್‌ಷಿಪ್‌ ಕಂಚು ವಿಜೇತೆ ವಿನೇಶಾ ಪೋಗಟ್‌ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದು ಪದಕದ ಭರವಸೆ ಮೂಡಿಸಿದ್ದಾರೆ. ನಿರ್ಮಲಾ ದೇವಿ 50 ಕೆಜಿ ವಿಭಾಗದಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.