ರೋಮ್‌ ರ‍್ಯಾಂಕಿಂಗ್‌ ಕುಸ್ತಿ ಟೂರ್ನಿ: ಬಜರಂಗ್‌, ರವಿಗೆ ಚಿನ್ನ ರೋಮ್‌: ಭಾರತದ ಬಜರಂಗ್‌ ಪುನಿಯಾ ಹಾಗೂ ರವಿಕುಮಾರ್‌ ದಹಿಯಾ ರೋಮ್‌ ರ‍್ಯಾಂಕಿಂಗ್‌ ಸಿರೀಸ್‌ ಕುಸ್ತಿ ಟೂರ್ನಿಯಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ. 25 ವರ್ಷದ ಬಜರಂಗ್‌ ಶನಿವಾರ ರಾತ್ರಿ ನಡೆದ 65 ಕೆಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಬೌಟ್‌ನಲ್ಲಿ ಅಮೆರಿಕದ ಜೊರ್ಡಾನ್ ಮೈಕೆಲ್‌ ಒಲಿವರ್‌ ಎದುರು 4–3 ಪಾಯಿಂಟ್‌ಗಳ ಜಯ ಸಾಧಿಸಿದರು. 61 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ 23 ವರ್ಷದ ರವಿಕುಮಾರ್‌ ದಹಿಯಾ ಅವರು ಕಜಕಸ್ತಾನದ ನೂರ್‌ಬೊಲಾತ್‌ ಅಬ್ದುಲಾಯೆವ್‌ ವಿರುದ್ಧ 12–2ರ ಭರ್ಜರಿ ಜಯ ಸಾಧಿಸಿದರು. ಇದಕ್ಕೂ ಮುನ್ನ ಭಾರತದ ಪಟು ಮೊಲ್ಡೊವಾದ ಅಲೆಕ್ಸಾಂಡ್ರು ಚಿರ್ಟಾವೊಕಾ ಹಾಗೂ ಕಜಕಸ್ತಾನದ ನೂರ್‌ಇಸ್ಲಾಮ್ ಸನಾಯೆವ್‌ ವಿರುದ್ಧ ಗೆದ್ದು ಬೀಗಿದ್ದರು. ಬಜರಂಗ್‌ ಅವರು ಮೊದಲ ಸುತ್ತಿನ ಹಣಾಹಣಿಯಲ್ಲಿ ಅಮೆರಿಕದ ಜೈನ್‌ ಅಲ್ಲೆನ್‌ ರೆದರ್‌ಫೋರ್ಡ್‌ ವಿರುದ್ಧ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಜೋಸೆಫ್‌ ಕ್ರಿಸ್ಟೊಫರ್‌ ಎದುರು ಜಯದ ನಗೆ ಬೀರಿದ್ದರು. ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ವಾಸಿಲ್‌ ಶಪ್ಟರ್‌ ಸವಾಲು ಮೀರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.