: ಬ್ಯಾಸ್ಕೆಟ್‌ಬಾಲ್‌: ಅಮೆರಿಕಕ್ಕೆ ಮತ್ತೊಂದು ಚಿನ್ನ ಸಾಯ್‌ತಮಾ: ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನಲ್ಲಿ ಅಮೆರಿಕ ತಂಡ ಪ್ರಾಬಲ್ಯ ಮುಂದುವರಿಸಿತು. ಟೋಕಿಯೊ ಕೂಟದ ಅಂತಿಮ ದಿನ ನಡೆದ ಫೈನಲ್‌ನಲ್ಲಿ ಈ ತಂಡ 90–75 ಪಾಯಿಂಟ್ಸ್‌ನಿಂದ ಜಪಾನ್‌ ವಿರುದ್ಧ ಜಯಿಸಿತು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ ಏಳನೇ ಚಿನ್ನದ ಪದಕ ಗೆದ್ದ ಹಿರಿಮೆ ತನ್ನದಾಗಿಸಿಕೊಂಡಿತು. ಜೊತೆಗೆ ತಮ್ಮದೇ ದೇಶದ ಪುರುಷರ ತಂಡದ ಸಾಧನೆಯನ್ನು ಸರಿಗಟ್ಟಿತು. ತಂಡವು ಒಲಿಂಪಿಕ್ಸ್‌ನಲ್ಲಿ ಸತತ 55 ಪಂದ್ಯ ಜಯಿಸಿದ ಶ್ರೇಯಕ್ಕೂ ಪಾತ್ರವಾಗಿದೆ. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಈ ತಂಡದವರು ಕೊನೆಯದಾಗಿ ಪಂದ್ಯವೊಂದರಲ್ಲಿ ಸೋತಿದ್ದರು. ತಂಡದಲ್ಲಿದ್ದ ಅನುಭವಿ ಆಟಗಾರ್ತಿಯರಾದ ಡಯಾನ ಟೌರಾಸಿ ಮತ್ತು ಸ್ಯೂ ಬರ್ಡ್‌ ಅವರು ಐದನೇ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು. ಇದರೊಂದಿಗೆ ಹೊಸ ದಾಖಲೆಯನ್ನೂ ಬರೆದರು. ಜಪಾನ್‌ ವಿರುದ್ಧ ಅಮೆರಿಕ ತಂಡ ಪೂರ್ಣ ಪ್ರಾಬಲ್ಯ ಮೆರೆಯಿತು. ಈ ತಂಡದ ಬ್ರಿಟ್ನಿ ಗ್ರೀನರ್‌ 30 ಪಾಯಿಂಟ್ಸ್‌ ಕಲೆಹಾಕಿದರು. ಎಜಾ ವಿಲ್ಸನ್‌ ಮತ್ತು ಬ್ರಿಯೆನ್ನಾ ಸ್ಟೀವರ್ಟ್‌ ಕ್ರಮವಾಗಿ 19 ಹಾಗೂ 14 ಪಾಯಿಂಟ್ಸ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.