ನಡಿಗೆ: ಭಾರತ ತಂಡದಲ್ಲಿ ಭಾವನ ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾವನ ಜಾಟ್‌ ಅವರು ಮುಂಬರುವ ಏಷ್ಯಾ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಭಾರತದ 20 ಕಿಲೊ ಮೀಟರ್ಸ್‌ ನಡಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾ ಚಾಂಪಿಯನ್‌ಷಿಪ್‌, ಮಾರ್ಚ್‌ 15ರಿಂದ ಜಪಾನ್‌ನ ನೋಮಿ ನಗರದಲ್ಲಿ ನಡೆಯಲಿದೆ. ಪ್ರಿಯಾಂಕ ಗೋಸ್ವಾಮಿ, ಕರಮಜೀತ್‌ ಕೌರ್‌, ರವೀನಾ ಮತ್ತು ಸೋನಲ್‌ ಸುಕ್ವಾಲ್‌ ಅವರೂ ಮಹಿಳಾ ವಿಭಾಗದಲ್ಲಿ ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ. 23 ವರ್ಷ ವಯಸ್ಸಿನ ಭಾವನ, ಹೋದ ವಾರ ರಾಂಚಿಯಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 1 ಗಂಟೆ 29 ನಿಮಿಷ 54 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಇದರೊಂದಿಗೆ ಟೋಕಿಯೊ ಟಿಕೆಟ್‌ ಗಿಟ್ಟಿಸಿದ್ದರು. ಸಂದೀಪ್‌ ಕುಮಾರ್‌, ರಾಹುಲ್‌, ವಿಕಾಸ್‌ ಸಿಂಗ್‌, ದೇವೇಂದರ್‌ ಸಿಂಗ್‌, ಗಣಪತಿ ಕೃಷ್ಣನ್‌, ಚಂದನ್‌ ಸಿಂಗ್‌, ಏಕನಾಥ್‌ ತುರಂಬೇಕರ್‌ ಮತ್ತು ಕೆ.ಟಿ.ಇರ್ಫಾನ್‌ ಅವರು ಪುರುಷರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.